- ಟ್ರಯಲ್ ಕೋರ್ಟ್
- Like this post: 7
ಬಿಟ್ ಕಾಯಿನ್ ಹಗರಣ; ಶ್ರೀಕಿ ಸೇರಿ ಮೂವರು ಆರೋಪಿಗಳು 10 ದಿನ ಇಡಿ ವಶಕ್ಕೆ
- by LegalSamachar
- May 9, 2026
- 4 Views
ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಸುನೀಶ್ ಹೆಗಡೆ ಹಾಗೂ ರಾಬಿನ್ ಖಂಡೇಲವಾಲ್ ಅವರನ್ನು 10 ದಿನ ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಒಪ್ಪಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರು ಮೂವರೂ ಆರೋಪಿಗಳನ್ನು ಮೇ 19ರವರೆಗೆ ಇಡಿ ಕಸ್ಟಡಿಗೆ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ಶನಿವಾರ ಬೆಳಗ್ಗೆ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಹಾಜರುಪಡಿಸಲಾಗಿತ್ತು.
ಶ್ರೀಕಿ ಪರ ವಕೀಲರು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ, ಆರೋಪಿಯು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಾದಿಸಿದರು. ಇದನ್ನು ಪರಿಗಣಿಸದ ನ್ಯಾಯಾಧೀಶರು ಎಲ್ಲ ಆರೋಪಿಗಳನ್ನು ಇಡಿ ಸುಪರ್ದಿಗೆ ಒಪ್ಪಿಸಿ ಆದೇಶಿಸಿದರು.
ಪ್ರಕರಣದ ಹಿನ್ನೆಲೆ:
ಕರ್ನಾಟಕ ಸರ್ಕಾರ ಇ-ಪ್ರಕ್ಯೂರ್ಮೆಂಟ್ ಪೋರ್ಟಲ್ನಿಂದ 11.5 ಕೋಟಿ ರೂ. ಕದ್ದಿರುವುದು, ಭಾರತದ ಗೇಮಿಂಗ್ ವೆಬ್ಸೈಟ್ಗಳ ಹ್ಯಾಕಿಂಗ್ ಮತ್ತು ವಿದೇಶದಲ್ಲಿ ಕ್ರಿಪ್ಟೊ ಕರೆನ್ಸಿ ಬದಲಾವಣೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಶ್ರೀಕಿ ಸ್ನೇಹಿತ ಎನ್ನಲಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮನೆಯಲ್ಲಿಯೂ ಇಡಿ ಶೋಧ ನಡೆಸಿತ್ತು. ಯುನೋಕಾಯಿನ್ ಹ್ಯಾಕಿಂಗ್ ಮತ್ತು ಕಳವು ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಶ್ರೀಕಿ ಮತ್ತಿತರರ ವಿರುದ್ಧ ತನಿಖೆ ನಡೆಸಿತ್ತು.
ಗೇಮಿಂಗ್ ವೆಬ್ಸೈಟ್ಗಳ ಹ್ಯಾಕಿಂಗ್ ಮತ್ತು ಬಿಟ್ ಕಾಯಿನ್ ಬಳಸಿ ಡಾರ್ಕ್ನೆಟ್ ಮೂಲಕ ಮಾದಕ ದ್ರವ್ಯ ತರಿಸಿದ ಆರೋಪದ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಹಿರಿಯ ಐಪಿಎಸ್ ಅಧಿಕಾರಿ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಎಸ್ಐಟಿ ನೇಮಿಸಲಾಗಿತ್ತು. ಆನಂತರ, 2024ರ ಜುಲೈನಲ್ಲಿ ಶ್ರೀಕಿ ಹಾಗೂ ಖಂಡೇಲವಾಲಾ ವಿರುದ್ಧ ದಾಖಲಾಗಿರುವ ಕೊಕಾ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಈ ಇಬ್ಬರೂ 2020ರಲ್ಲಿ ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ.
Related Articles
Thank you for your comment. It is awaiting moderation.



Comments (0)