- ಟ್ರಯಲ್ ಕೋರ್ಟ್
- Like this post: 8
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೂಷ್ ಮಾಫಿ ಸಾಕ್ಷಿ; ದರ್ಶನ್ ಇತರರಿಗೆ ವಿರೋಧ ದಾಖಲಿಸಲು ಅನುಮತಿ ನಿರಾಕರಣೆ
- by Jagan Ramesh
- August 10, 2026
- 6 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾಪಣೆ ನೀಡಿದರೆ ಮಾಫಿ ಸಾಕ್ಷಿಯಾಗಲು ಸಿದ್ಧವಿರುವುದಾಗಿ ಆರೋಪಿ ಪ್ರದೂಷ್ ರಾವ್ (ಎ14) ಸಲ್ಲಿಸಿರುವ ಅರ್ಜಿಗೆ ವಿರೋಧ ದಾಖಲಿಸಲು ಎರಡನೇ ಆರೋಪಿಯಾದ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಅನುಮತಿ ನಿರಾಕರಿಸಿದೆ.
ಪ್ರದೂಷ್ ರಾವ್ ಕ್ಷಮಾಪಣೆ ಕೋರಿರುವ ಅರ್ಜಿಯ ವಿಚಾರಣಾ ಪ್ರಕ್ರಿಯೆಯಲ್ಲಿ ದರ್ಶನ್ ಹಾಗೂ ಇತರ ಆರೋಪಿಗಳು ವಾದ ದಾಖಲಿಸುವ ಹಕ್ಕು ಹೋದಿಲ್ಲ ಎಂದು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಅವರ ಪೀಠ ಸೋಮವಾರ ಹೇಳಿದೆ.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಪ್ರದೂಷ್ ಅರ್ಜಿಗೆ ವಿರೋಧ ದಾಖಲಿಸಲು ಅನುಮತಿಸಬೇಕು ಎಂದು ಕೋರಿದ್ದರು. ಇದನ್ನು ತಿರಸ್ಕರಿಸಿರುವ ನ್ಯಾಯಾಲಯವು ಕ್ಷಮಾಪಣೆ ವಿಚಾರವು ಅದನ್ನು ಕೋರುತ್ತಿರುವ ವ್ಯಕ್ತಿ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದೆ.
ಪ್ರಕರಣದ ಇತರ ಆರೋಪಿಗಳ ವಾದ ಆಲಿಸುವ ಹಕ್ಕಿನ ವಿಚಾರಕ್ಕೆ ಸೀಮಿತವಾಗಿ ಆದೇಶ ಮಾಡಿದ್ದು, ಪ್ರದೂಷ್ ರಾವ್ ಅರ್ಜಿಯ ಮೆರಿಟ್ ಮೇಲೆ ಯಾವುದೇ ಆದೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಪ್ರದೂಷ್ ಪ್ರಸ್ತಾಪಿಸಿರುವ ವಿಚಾರಗಳನ್ನು ಕಾನೂನಿನ ಅಡಿ ಪ್ರತ್ಯೇಕವಾಗಿ ಪರಿಗಣಿಸಲಾಗುವುದು ಎಂದು ಹೇಳಿದೆ.
ಇದೇ ವೇಳೆ, ಪ್ರದೂಷ್ ಮಾಫಿ ಸಾಕ್ಷಿಯಾಗುವುದರಿಂದ ಇತರ ಆರೋಪಿಗಳಿಗೆ ಪೂರ್ವಾಗ್ರಹ ಉಂಟು ಮಾಡಲಿದೆ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಪ್ರದೂಷ್‌ಗೆ ಕ್ಷಮಾಪಣೆ ನೀಡುವುದರಿಂದ ಇತರ ಆರೋಪಿಗಳಿಗೆ ತಮ್ಮನ್ನು ಸಮರ್ಥಿಸುವ ಹಕ್ಕು ಕಡಿತವಾಗುವುದಿಲ್ಲ. ಪ್ರದೂಷ್‌ಗೆ ಕ್ಷಮೆ ನೀಡಿ, ಆತ ಮಾಫಿ ಸಾಕ್ಷಿಯಾಗಿ ನೀಡುವ ಹೇಳಿಕೆ ಅಥವಾ ಸಾಕ್ಷಿಯು ವಿಚಾರಣೆಯ ಸಂದರ್ಭದಲ್ಲಿ ಜಾರಿಯಲ್ಲಿರುವ ನಿಯಮಗಳಿಗೆ ಒಳಪಡುತ್ತದೆ. ಇತರ ಆರೋಪಿಗಳು ಪ್ರದೋಷ್‌ನನ್ನು ಸಂಪೂರ್ಣವಾಗಿ ಪಾಟೀ ಸವಾಲಿಗೆ ಒಳಪಡಿಸುವ ಮೂಲಕ ಸತ್ಯ ಅನಾವರಣಗೊಳಿಸಬಹುದಾಗಿದೆ ಎಂದು ಕೋರ್ಟ್ ಹೇಳಿದೆ.
ಕ್ಷಮಾಪಣೆಗೆ ವಿರೋಧವಿಲ್ಲ ಎಂದ ಪ್ರಾಸಿಕ್ಯೂಷನ್:
ಪ್ರಾಸಿಕ್ಯೂಷನ್ ಪರವಾಗಿ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್, ಕೊಲೆಗೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಸಂಪೂರ್ಣ ವಿಚಾರಗಳನ್ನು ಸತ್ಯದಿಂದ ನುಡಿಯುವ ಷರತ್ತಿಗೆ ಒಳಪಟ್ಟು ಪ್ರದೂಷ್‌ಗೆ ಕ್ಷಮಾಪಣೆ ನೀಡುವುದಕ್ಕೆ ತಮ್ಮ ವಿರೋಧವಿಲ್ಲ ಎಂದರು.
ಮೃತ ರೇಣುಕಾಸ್ವಾಮಿ ತಾಯಿಯು ಪ್ರಧಾನ ಸಾಕ್ಷಿ ವಿಚಾರಣೆ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ಗೆ ಬೆಂಬಲಿಸಿದ್ದರು. ಆದರೆ, ಪಾಟೀ ಸವಾಲಿನ ವೇಳೆ ಬೆಂಬಲಿಸಿರಲಿಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆ ಸೆಕ್ಷನ್ 154ರ ಅಡಿ ಅವರನ್ನು ಮತ್ತೊಮ್ಮೆ ಪಾಟೀ ಸವಾಲಿಗೆ ಒಳಪಡಿಸಲು ಅನುಮತಿ ಕೋರಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಅದು ವಿಚಾರಣೆಗೆ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಎರಡು ಸಾಕ್ಷಿಗಳು ಭಾಗಶಃ ಪ್ರಾಸಿಕ್ಯೂಷನ್‌ಗೆ ಬೆಂಬಲಿಸಿ, ಆನಂತರ ಪ್ರಮುಖ ಘಟ್ಟದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ. ಇನ್ನೊಬ್ಬ ಪ್ರತ್ಯಕ್ಷ ಸಾಕ್ಷಿಯೂ ಪ್ರಾಸಿಕ್ಯೂಷನ್ ಸಾಕ್ಷಿಗೆ ಬೆಂಬಲಿಸದಿರುವ ಸಾಧ್ಯತೆ ಬಗ್ಗೆ ಆತಂಕವಿದೆ. ಆದ್ದರಿಂದ, ಪ್ರದೂಷ್ ಕ್ಷಮಾಪಣೆ ಕೋರಿ ಮಾಫಿ ಸಾಕ್ಷಿಯಾಗಲು ಮಾಡಿರುವ ಮನವಿಯನ್ನು ಪುರಸ್ಕರಿಸಿಸಬೇಕು. ಆರೋಪಿಗಳಿಗೆ ಪ್ರದೂಷ್ ಅರ್ಜಿ ವಿರೋಧಿಸುವ ಹಕ್ಕಿಲ್ಲ ಎಂದರು.
ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಪ್ರದೂಷ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಇತರೆಲ್ಲ ಆರೋಪಿಗಳಿಗೆ ಮಾಹಿತಿ ನೀಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಅಲ್ಲದೇ, ಪ್ರದೂಷ್‌ಗೆ ಪ್ರಾಸಿಕ್ಯೂಷನ್ ಲಿಖಿತ ಆಕ್ಷೇಪಣೆ ಸಲ್ಲಿಸಿಲ್ಲ. ಕ್ಷಮಾಪಣೆ ನೀಡುವುದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸಿಲ್ಲ ಎಂದು ಆಕ್ಷೇಪಿಸಿದ್ದರು.
Related Articles
Thank you for your comment. It is awaiting moderation.


Comments (0)