ರೇಣುಕಾಸ್ವಾಮಿ ಕೊಲೆ ಪ್ರಕರಣ; ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ ಅರ್ಜಿ ಸಲ್ಲಿಸಿದ ದರ್ಶನ್‌ ಸ್ನೇಹಿತರಾದ ವಿನಯ್‌, ಪ್ರದೂಷ್‌

ಬೆಂಗಳೂರು: ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದ ಸಹ ಆರೋಪಿಗಳಾಗಿರುವ ದರ್ಶನ್ ಅವರ ಇಬ್ಬರು ಆತ್ಮೀಯ ಸ್ನೇಹಿತರಾದ ವಿನಯ್‌ ಹಾಗೂ ಪ್ರದೂಷ್‌ ರಾವ್‌ ತಮ್ಮನ್ನು ಮಾಫಿ ಸಾಕ್ಷಿಗಳನ್ನಾಗಿ ಪರಿಗಣಿಸುವಂತೆ ಕೋರಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 307ರ ಅಡಿ ಮಾಫಿ ಸಾಕ್ಷಿಗಳನ್ನಾಗಿ (ಅಪ್ರೂವರ್) ಪರಿಗಣಿಸಿ, ಕ್ಷಮೆ ನೀಡಿ ಬಿಡುಗಡೆ ಮಾಡುವಂತೆ ಕೋರಿ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕನಾದ ವಿನಯ್‌ (10ನೇ ಆರೋಪಿ) ಹಾಗೂ ಪ್ರದೂಷ್‌ ರಾವ್‌ (14ನೇ ಆರೋಪಿ) ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ, ದರ್ಶನ್‌ ಸೇರಿ ಎಲ್ಲ ಆರೋಪಿಗಳು ವಹಿಸಿದ ಪಾತ್ರವನ್ನು ಪ್ರದೂಷ್‌ ವಿವರಿಸಿದ್ದಾರೆ. ಜತೆಗೆ, ರೇಣುಕಾಸ್ವಾಮಿ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಗುಂಡು ಹಾರಿಸಿಕೊಂಡು ಸಾಯುವುದಾಗಿ ದರ್ಶನ್‌ ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ, ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ ಪರ ನಾನು ಸಾಕ್ಷ್ಯ ನುಡಿಯುತ್ತೇನೆ ಎಂದು ಪ್ರದೂಷ್‌ ಅರ್ಜಿಯಲ್ಲಿ ಕೋರಿದ್ದಾರೆ.

ಈ ಅರ್ಜಿಗೆ ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್‌ ಅವರು ಲಿಖಿತವಾಗಿಯೇ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ, ಈ ಅರ್ಜಿಯನ್ನು ಪುರಸ್ಕರಿಸಬಾರದು. ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು ಎಂದು ದರ್ಶನ್‌ ಹಾಗೂ ಇತರ ಆರೋಪಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಇದರಿಂದ, ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್‌ ಮತ್ತು ಪ್ರದೂಷ್‌ ಸಲ್ಲಿಸಿರುವ ಅರ್ಜಿ ಸಂಬಂಧ ಇತರ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆಗಸ್ಟ್‌ 10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿರುವ ನ್ಯಾಯಾಲಯ, ವಿಚಾರಣೆ ಮುಂದೂಡಿದೆ.

ಪ್ರದೂಷ್ ಅರ್ಜಿಗೆ ಇತರ ಆರೋಪಿಗಳ ಆಕ್ಷೇಪ:
ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿ ಪ್ರದೂಷ್‌ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್‌ ಹಾಗೂ ಇತರ ಆರೋಪಿಗಳು, ಅರ್ಜಿಯನ್ನು ಪರಿಗಣಿಸಬಾರದು. ಆತನ ಅರ್ಜಿಯಲ್ಲಿ ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್‌ ಅವರು, ಪ್ರದೂಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್‌ ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್‌ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿರುವನೇ, ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್‌ ಖಚಿತಪಡಿಸಬೇಕು. ಇತರ ಆರೋಪಿಗಳ ವಿರುದ್ಧವೇ ಪ್ರದೂಷ್‌ ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಂತಿಮವಾಗಿ, ಎಲ್ಲ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಆಗಸ್ಟ್‌ 10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ಪ್ರದೂಷ್ ರಾವ್ ಅರ್ಜಿಯಲ್ಲೇನಿದೆ?
ದರ್ಶನ್ ಜತೆಗೆ 2003ರಿಂದ ಆರಂಭವಾದ ಸ್ನೇಹ, 2024ರ ಜೂನ್‌ 9ರಂದು ನಡೆದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಇತರ ಆರೋಪಿಗಳು ವಹಿಸಿದ ಪಾತ್ರವನ್ನು ಪ್ರದೂಷ್ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ. ಜತೆಗೆ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನೂ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಇನ್ಸ್ಟಾಗ್ರಾಂ, ಫೇಸ್‌ಬುಕ್‌ ಖಾತೆಯ ಮೂಲಕ ಕಳುಹಿಸಿದ್ದ ಸಂದೇಶಗಳನ್ನಷ್ಟೇ ನಾನು ಓದಿದೆ. ವಾಸ್ತವದಲ್ಲಿ ಕೊಲೆ ನಡೆಯದಂತೆ ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್‌ ತಡೆಯಲು ಪ್ರತ್ನಿಸಿದೆ. ದರ್ಶನ್‌ ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್‌ ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗುಂಡು ಹಾರಿಸಿಕೊಂಡು ಸಾಯುವುದಾಗಿ ಬೆದರಿಸಿದರು. ಇದಕ್ಕೆ ಹೆದರಿ ನಾನು ದರ್ಶನ್‌ಗೆ ಸಹಾಯ ಮಾಡಿದೆ ಎಂದು ಹೇಳಿರುವ ಪ್ರದೂಷ್‌, ‘ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್ ಮನವಿ:
ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್‌ ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್‌ ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿಪಿ ಪ್ರಸನ್ನಕುಮಾರ್‌, ಅರ್ಜಿಯಲ್ಲಿ ವಿನಯ್‌ ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇಡಬೇಕು ಎಂದು ಕೋರಿದರು.

Related Articles

Comments (0)

Leave a Comment