ಸಂವಿಧಾನ ಇರುವುದು ಕಟ್ಟಕಡೆಯ ವ್ಯಕ್ತಿಗಾಗಿ, ಉಳ್ಳವರಿಗಾಗಿ ಅಲ್ಲ: ಬಿ.ಕೆ. ಹರಿಪ್ರಸಾದ್
- by Legal Samachar
- November 25, 2026
- 3 Views
ಬೆಂಗಳೂರು: ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತಕ್ಕಾಗಿ. ಯಾವುದೇ ಧರ್ಮ ಸಂವಿಧಾನಕ್ಕೆ ರಕ್ಷಣೆ ನೀಡುವುದಿಲ್ಲ; ಸಂವಿಧಾನವೇ ಎಲ್ಲ ಧರ್ಮಗಳಿಗೂ ರಕ್ಷಣೆ ನೀಡುತ್ತದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಾನೂನು ಘಟಕದಿಂದ ಭಾರತ ಜೋಡೋ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ‘ಸಂವಿಧಾನ ಮತ್ತು ಪ್ರಸ್ತುತ ರಾಜಕಾರಣ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಕಾನೂನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡಬೇಕು ಎಂದರು.
ಜಾತಿ, ಮತ, ಧರ್ಮ ಮತ್ತು ಭಾಷೆಯ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವುದೇ ಸಂವಿಧಾನದ ಮೂಲ ಆಶಯ. ಸಾರ್ವಜನಿಕ ಬದುಕಿನಲ್ಲಿ ಸಂವಿಧಾನವೇ ಶ್ರೇಷ್ಠ. ಸಮಾನತೆ, ಸಮಪಾಲು ಮತ್ತು ಸಮಬಾಳು ಅದರ ಪ್ರಮುಖ ತತ್ವಗಳಾಗಿವೆ ಎಂದು ತಿಳಿಸಿದರು.
ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂಬುದು ಸುಳ್ಳು. ಅವರ ಪಾಂಡಿತ್ಯ ಮತ್ತು ಜ್ಞಾನವನ್ನು ದೇಶದ ಸಂವಿಧಾನ ರಚನೆಗೆ ಬಳಸಿಕೊಳ್ಳಲಾಯಿತು ಎಂದರು.

ಮೀಸಲಾತಿ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಶತಮಾನಗಳಿಂದ ಸಾಮಾಜಿಕ ಶೋಷಣೆಗೆ ಒಳಗಾದ ಸಮುದಾಯಗಳಿಗೆ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ವ್ಯವಸ್ಥೆಯಾಗಿದೆ ಎಂದು ಪ್ರತಿಪಾದಿಸಿದರು. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕಲ್ಪಿಸಲು ಅಂಬೇಡ್ಕರ್ ನಡೆಸಿದ ಪ್ರಯತ್ನವನ್ನೂ ಸ್ಮರಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತಕ್ಕೂ ಸಮಾನ ಮೌಲ್ಯವಿದೆ. ಆದರೆ ಇಂದು ವೋಟು ಮತ್ತು ನೋಟು ಒಂದಾಗುತ್ತಿರುವುದು ಆತಂಕಕಾರಿ. ಇವೆರಡನ್ನು ಬೇರ್ಪಡಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದು ಹೇಳಿದರು.
ಯುವಜನರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಶಕ್ತಿ ಬಳಸಬೇಕು. ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಸಂವಿಧಾನದ ಹಿನ್ನೆಲೆಯನ್ನು ಅರಿತು, ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗಾವಕಾಶಗಳ ಕುರಿತು ಚರ್ಚಿಸಬೇಕು. ಸಂವಿಧಾನದ ಆಶಯಗಳನ್ನು ಉಳಿಸಿ ಪ್ರಜಾಪ್ರಭುತ್ವ ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎ.ಎಸ್. ಪೊನ್ನಣ್ಣ, ಮಂಜುನಾಥ್ ಭಂಡಾರಿ, ಸಿ.ಎಂ. ಧನಂಜಯ, ರಮೇಶ್ ಬಾಬು, ವಿ.ಎಸ್. ಉಗ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.


Comments (0)