ಕರ್ನಾಟಕದಲ್ಲಿ ₹350 ಕೋಟಿ ಹೂಡಿಕೆಯೊಂದಿಗೆ ಪಿಕ್ಸೆಲ್ ಉಪಗ್ರಹ ಉತ್ಪಾದನಾ ಘಟಕ
- by Legal Samachar
- November 24, 2026
- 8 Views
ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ, ಬೆಂಗಳೂರಿನ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಪಿಕ್ಸೆಲ್ (Pixxel) ಕರ್ನಾಟಕದಲ್ಲಿ ₹350 ಕೋಟಿ ಹೂಡಿಕೆಯೊಂದಿಗೆ ಉಪಗ್ರಹ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಂಸ್ಥೆಯೊಂದಿಗೆ ಹಲವು ತಿಂಗಳುಗಳಿಂದ ಮಾತುಕತೆ ನಡೆಸಿ, ಅದರ ವಿಸ್ತರಣಾ ಯೋಜನೆ ಹಾಗೂ ಹೂಡಿಕೆಯ ಅಗತ್ಯಗಳನ್ನು ಅರಿತುಕೊಂಡು ರಾಜ್ಯದಲ್ಲಿ ಪೂರಕ ವಾತಾವರಣ ಕಲ್ಪಿಸಲು ಸರ್ಕಾರ ಪ್ರಯತ್ನಿಸಿದೆ ಎಂದಿದ್ದಾರೆ.

ಆರು ಎಕರೆ ಭೂಮಿಯಲ್ಲಿ ಘಟಕ ಸ್ಥಾಪಿಸಲು ₹350 ಕೋಟಿ ಹೂಡಿಕೆಯ ಪ್ರಸ್ತಾವನೆ ನವೆಂಬರ್ 3ರಂದು ಸ್ವೀಕೃತವಾಗಿತ್ತು. ಕೇವಲ ಎರಡು ವಾರಗಳಲ್ಲೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ (SLWCC) ಮುಂದೆ ಮಂಡಿಸಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹೂಡಿಕೆದಾರರಿಗೆ ತ್ವರಿತ ಅನುಮೋದನೆ, ಪಾರದರ್ಶಕ ಆಡಳಿತ ಮತ್ತು ಉದ್ಯಮಸ್ನೇಹಿ ವಾತಾವರಣ ಒದಗಿಸುವ ಸರ್ಕಾರದ ಬದ್ಧತೆಗೆ ಈ ನಿರ್ಧಾರ ಸಾಕ್ಷಿಯಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.
ಪಿಕ್ಸೆಲ್ನ ಈ ಹೂಡಿಕೆಯಿಂದ ರಾಜ್ಯದ ಬಾಹ್ಯಾಕಾಶ ತಂತ್ರಜ್ಞಾನ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದ್ದು, ಅತ್ಯಾಧುನಿಕ ಉತ್ಪಾದನೆ, ನಾವೀನ್ಯತೆ ಹಾಗೂ ಉದ್ಯೋಗ ಸೃಷ್ಟಿಗೆ ಹೊಸ ಅವಕಾಶಗಳು ಲಭಿಸಲಿವೆ ಎಂದು ಅವರು ತಿಳಿಸಿದ್ದಾರೆ.


Comments (0)