ದೆಹಲಿ ಕೆಫೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
- by Legal Samachar
- November 25, 2026
- 6 Views
ನವದೆಹಲಿ: ಪೂರ್ವ ದೆಹಲಿಯ ಪ್ರೀತ್ ವಿಹಾರ್ನ ಕೆಫೆಯೊಂದರಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ನವೆಂಬರ್ 23ರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ಹಾಗೂ ಆರೋಪಿಗಳು ಒಂದೇ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಗಳೊಂದಿಗೆ ಕೆಫೆಯಲ್ಲಿ ನಡೆದ ಪಾರ್ಟಿಯಲ್ಲಿ ಯುವತಿ ಭಾಗವಹಿಸಿದ್ದಳು. ರಾತ್ರಿ 11.30ಕ್ಕೆ ಕೆಫೆ ಮುಚ್ಚಿದ್ದರೂ, ಗುಂಪಿನಲ್ಲಿದ್ದ ಒಬ್ಬರ ಬಳಿ ಕೀಲಿಕೈ ಇತ್ತು ಎನ್ನಲಾಗಿದೆ.

ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ ಏಳು ಮಂದಿ ಮೊದಲು ಮತ್ತೊಂದು ಕೆಫೆಯಲ್ಲಿ ಸೇರಿ, ಬಳಿಕ ಮುಂಜಾನೆ 3 ಗಂಟೆಗೆ ಪ್ರೀತ್ ವಿಹಾರ್ನ ಮತ್ತೊಂದು ಕೆಫೆಗೆ ತೆರಳಿದ್ದರು. ಮುಂಜಾನೆ 3.30ರ ಸುಮಾರಿಗೆ ಇಬ್ಬರು ಪುರುಷರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಗುಂಪಿನಲ್ಲಿದ್ದ ಇತರರೂ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏಳು ಮಂದಿಯೂ ಮದ್ಯಪಾನ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಜಾನೆ 5.30ಕ್ಕೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ. ಉಳಿದ ಶಂಕಿತರಿಗಾಗಿ ಪೊಲೀಸರು ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Comments (0)