ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ; ಮತ್ತೆ ಇಬ್ಬರು ಅಸ್ವಸ್ಥ
- by Legal Samachar
- November 25, 2026
- 6 Views
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನವೂ ಮುಂದುವರಿಯಿತು. ಅನ್ನಾಹಾರದ ಕೊರತೆ, ಶೌಚಾಲಯ ಸಮಸ್ಯೆ ಹಾಗೂ ತೀವ್ರ ಚಳಿಯಿಂದ ಪ್ರತಿಭಟನಾಕಾರರ ಆರೋಗ್ಯ ಹದಗೆಡುತ್ತಿದ್ದು, ಬುಧವಾರದ ಹೋರಾಟದ ವೇಳೆ ಮತ್ತೆ ಇಬ್ಬರು ಅಸ್ವಸ್ಥರಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಜುಬೇದಾ ಬೇಗಂ (36) ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರೆ, ದೊಡ್ಡಬಳ್ಳಾಪುರದ ಲಕ್ಷ್ಮಮ್ಮ (50) ಎದೆನೋವಿನಿಂದ ಬಳಲುತ್ತಿದ್ದಾರೆ. ಇಬ್ಬರನ್ನೂ ಆ್ಯಂಬುಲೆನ್ಸ್ ಮೂಲಕ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಒಂಬತ್ತು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ಒಟ್ಟು 20 ಆಶಾ ಕಾರ್ಯಕರ್ತೆಯರು ಅಸ್ವಸ್ಥರಾಗಿದ್ದಾರೆ.


Comments (0)