369 ನ್ಯಾಯಾಧೀಶರ ವರ್ಗಾವಣೆ; ಅಧಿಸೂಚನೆ ಹೊರಡಿಸಿದ ಹೈಕೋರ್ಟ್

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 369 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್‌ ಗುರುವಾರ ಅಧಿಸೂಚನೆ ಹೊರಡಿಸಿದೆ.

ವರ್ಗಾವಣೆಯಾಗಿರುವವರಲ್ಲಿ 115 ಜಿಲ್ಲಾ ನ್ಯಾಯಾಧೀಶರು, 115 ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ 139 ಸಿವಿಲ್‌ ನ್ಯಾಯಾಧೀಶರು ಸೇರಿದ್ದಾರೆ. ಪ್ರತಿವರ್ಷ ಬೇಸಿಗೆ ರಜೆಗೂ ಮುನ್ನ ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಇದು ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿದೆ.

ವರ್ಗಾವಣೆಯ ಪಟ್ಟಿಯನ್ನು ಹೈಕೋರ್ಟ್‌ ವೆಬ್‌ಸೈಟ್‌‌ನಲ್ಲಿ ಪ್ರಕಟಿಸಲಾಗಿದ್ದು, ಜೂನ್ 1ರಿಂದ ವರ್ಗಾವಣೆ ಆದೇಶ ಅನ್ವಯವಾಗಲಿದೆ.

ಹಾಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಆಗಿರುವ ಕೆ.ಎಸ್‌. ಭರತ್‌ ಕುಮಾರ್‌ ಅವರನ್ನು ಬೆಂಗಳೂರು ನಗರ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರನ್ನಾಗಿ ನಿಯೋಜಿಸಲಾಗಿದ್ದು, ರಿಜಿಸ್ಟ್ರಾರ್‌ ಜನರಲ್‌ ಸ್ಥಾನಕ್ಕೆ ಹಾಲಿ ಬೆಂಗಳೂರು ನಗರದ ಪ್ರಧಾನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿರುವ ಎಂ. ಚಂದ್ರಶೇಖರ್‌ ರೆಡ್ಡಿ ಅವರನ್ನು ನಿಯೋಜಿಸಲಾಗಿದೆ.

ಸದ್ಯ ಯೋಗೀಶಗೌಡ ಗೌಡರ್‌ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿಯನ್ನು ದೋಷಿ ಎಂದು ತೀರ್ಮಾನಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶ ಸಂತೋಷ್‌ ಗಜಾನನ ಭಟ್‌ ಅವರನ್ನು ಬೆಂಗಳೂರಿನಲ್ಲಿರುವ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಸಂತೋಷ್ ಗಜಾನನ ಭಟ್‌ ಅವರು ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಆಜೀವ ಸೆರೆವಾಸ ಶಿಕ್ಷೆ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಂತೋಷ್ ಗಜಾನನ ಭಟ್ ಅವರ ವರ್ಗಾವಣೆಯಿಂದ ತೆರವಾಗುವ ಹುದ್ದೆಗೆ ಕೆ.ಬಿ. ಶಿವಪ್ರಸಾದ್ ಅವರನ್ನು ವರ್ಗಾಯಿಸಲಾಗಿದೆ. ಶಿವಪ್ರಸಾದ್ ಅವರು ಹಾಲಿ ಮಂಡ್ಯದ 1ನೇ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Related Articles

Comments (0)

Leave a Comment