ದಶಕ ಕಳೆದರೂ ಪೋಕ್ಸೊ ಪ್ರಕರಣ ಇತ್ಯರ್ಥವಾಗದಿರುವುದಕ್ಕೆ ಹೈಕೋರ್ಟ್ ಕಳವಳ; 8 ವಾರ ಗಡುವು

ಬೆಂಗಳೂರು: ನಗರದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ 12 ವರ್ಷಗಳ ಹಿಂದೆ ನಡೆದಿದ್ದ ಆರು ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣವು ಕಾನೂನಿನ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ವಿಚಾರಣಾ ಹಂತದಲ್ಲೇ ಇರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ವಿಚಾರಣೆಗೆ 8 ವಾರಗಳ ಗಡುವು ವಿಧಿಸಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಕಾನೂನಾತ್ಮಕ ತಾಂತ್ರಿಕ ಅಂಶಗಳಡಿ ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ರಿಟ್‌ ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇದಕ್ಕಿಂತ ದುರದೃಷ್ಟಕರ ಸಂಗತಿ ಇನ್ನೊಂದಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತ ಬಾಲಕಿ ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ ಹೇಳಿಕೆಯ ಪ್ರತಿಯಲ್ಲಿ, ಬಾಲಕಿ ಮತ್ತು ಮ್ಯಾಜಿಸ್ಟ್ರೇಟ್ ಸಹಿಗಳು ಇಲ್ಲವೆಂಬ ಕಾರಣಕ್ಕಾಗಿ ಹೇಳಿಕೆ ದಾಖಲು ಮಾಡಿಕೊಂಡ ಮ್ಯಾಜಿಸ್ಟ್ರೇಟ್‌ ಅವರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು. ಈ ರೀತಿ ಅವಕಾಶ ಕೊಟ್ಟರೆ ಮುಂದೆ ಇಂತಹ ವಿಶೇಷ ಸನ್ನಿವೇಶಗಳು ಸಹಜವಾಗಿಬಿಡುವ ಸಾಧ್ಯತೆ ಇದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಈ ಸಂಬಂಧ ಬಾಲಕಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದ ಮ್ಯಾಜಿಸ್ಟ್ರೇಟ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಕೋರಲಾಗಿದ್ದ ಅರ್ಜಿಯ ಆದೇಶಕ್ಕೆ 2 ವರ್ಷಗಳಿಂದ ಇದ್ದ ತಡೆ ಆದೇಶವನ್ನು ತೆರವುಗೊಳಿಸಿದ್ದು, ವಿಚಾರಣೆಯಲ್ಲಿ ತೀರಾ ಅಗತ್ಯ ಎನಿಸಿದರೆ ಮ್ಯಾಜಿಸ್ಟ್ರೇಟ್‌ ಅವರನ್ನು ಸಾಕ್ಷ್ಯದಾಖಲು ಸಂದರ್ಭದಲ್ಲಿ ಬರಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

ಪ್ರಕರಣ ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ನೆಪದಲ್ಲಿ ಅನಗತ್ಯ ಮುಂದೂಡಿಕೆಗೆ ಒಳಗಾಗಿರುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು. ಇದೊಂದು ವಿವೇಚನಾರಹಿತ ನಡೆ. ಇಂತಹ ವಿಷಯಗಳಲ್ಲಿ ವಿಶೇಷವಾಗಿ ಪ್ರಾಸಿಕ್ಯೂಷನ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಗರೂಕವಾಗಿ ಇರಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.

ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದ ಚಿಕ್ಕ ಮಗುವೊಂದು ಸಹಿಯ ಮಹತ್ವವನ್ನು ಹೇಗೆ ತಾನೆ ಅರ್ಥಮಾಡಿಕೊಂಡೀತು? ವಯಸ್ಸು, ಪ್ರಬುದ್ಧತೆ ಅಥವಾ ಮಾನಸಿಕ ಸ್ಥಿತಿಯನ್ನು ಲೆಕ್ಕಿಸದೆ ಮಗುವಿನ ಸಹಿಗೆ ಒತ್ತಾಯ ಸಲ್ಲದು. ಪೋಕ್ಸೊ ಕಾಯ್ದೆ ಎಂಬುದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ರಕ್ಷಣಾತ್ಮಕ ಆಸರೆಯನ್ನು ವಿಸ್ತರಿಸುತ್ತದೆ ಎಂಬ ಬಗ್ಗೆ ಲಕ್ಷ್ಯವಿರಬೇಕು ಎಂದು ಹೈಕೋರ್ಟ್ ಹೇಳಿದೆ.

ಅಪರಾಧ ನ್ಯಾಯ ವ್ಯವಸ್ಥೆಯು, ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಗೆ ಶರಣಾಗಿರುವುದು ಇಲ್ಲಿ ಗೋಚರಿಸುತ್ತಿದೆ. ಲೈಂಗಿಕ ದೌರ್ಜನ್ಯದಡಿ ಅವಮಾನಕ್ಕೆ ಒಳಗಾದ ಮಗುವನ್ನು ವಿಚಾರಣೆಯ ನೆಪದಲ್ಲಿ ಅದೇ ಆಘಾತವನ್ನು ಪದೇಪದೆ ಅನುಭವಿಸುವಂತಹ ಸ್ಥಿತಿಗೆ ನೂಕುವುದು ಯಾವ ನ್ಯಾಯ? ಇದನ್ನು ಒಪ್ಪಲಾಗದು. ಪ್ರತಿಯೊಂದು ಅನಗತ್ಯ ಮುಂದೂಡಿಕೆಯೂ ಮೂಲ ಗಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಮತ್ತು ಆ ಪ್ರಕ್ರಿಯೆಯನ್ನೇ ದಬ್ಬಾಳಿಕೆಯ ಸಾಧನವನ್ನಾಗಿ ಪರಿವರ್ತಿಸುತ್ತದೆ. ಅಷ್ಟೇ ಅಲ್ಲ, ಸತ್ಯದ ಹುಡುಕಾಟವನ್ನೇ ಬೆದರಿಸುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ವಿಷಾದ ವ್ಯಕ್ತಪಡಿಸಿದೆ.

8 ವಾರಗಳ ಗಡುವು ನೀಡಿದ ಹೈಕೋರ್ಟ್:
ಪೋಕ್ಸೊ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ವಿಚಾರವಾಗಿ ಅಲಖ್ ಅಲೋಕ್ ಶ್ರೀವಾಸ್ತವ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ನಿರ್ದೇಶನಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ತ್ವರಿತ ವಿಚಾರಣೆಯ ಹಕ್ಕು ಎಂಬುದು ಅವರವರ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಬಹುದಾದ ಅಥವಾ ತಡೆಹಿಡಿಯಬಹುದಾದ ಕಾರ್ಯವಿಧಾನದ ಐಷಾರಾಮಿಯಲ್ಲ. ಇದು ಸಂವಿಧಾನದ ಪರಿಚ್ಛೇದ 21ರ ಅತ್ಯಗತ್ಯ ಅಂಶ ಎಂದು ಪ್ರತಿಪಾದಿಸಿದೆ.

ಪೋಕ್ಸೊ ಪ್ರಕರಣಗಳು ಒಂದು ವರ್ಷದೊಳಗೆ ಕಾನೂನು ಪ್ರಕ್ರಿಯೆಯನ್ನು ದಾಟಿ ಅಂತಿಮ ಹಂತ ತಲುಪಬೇಕೆಂಬ ಶಾಸನಬದ್ಧ ಆದೇಶಕ್ಕೆ ಜೀವ ತುಂಬುವುದು ಅತ್ಯಗತ್ಯ. ವಿಚಾರಣೆಯನ್ನು ಪದೇಪದೆ ಮುಂದೂಡುವ ಸಂಸ್ಕೃತಿ ಖಂಡನೀಯ. ಆದ್ದರಿಂದ, ಉಭಯ ಪಕ್ಷಗಾರರು ಈ ಆದೇಶ ತಲುಪಿದ 8 ವಾರಗಳಲ್ಲಿ ವಿಚಾರಣಾ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಪ್ರಕರಣದ ಹಿನ್ನೆಲೆ:
ಆರು ವರ್ಷದ ಬಾಲಕಿಯ ಮೇಲೆ 2014ರ ಜುಲೈ 14ರಂದು ಅತ್ಯಾಚಾರ ನಡೆದಿದೆ ಎಂಬ ಆರೋಪದಡಿ ಪೊಲೀಸರು ಶಾಲೆಯ ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿದ್ದರು. ಜಿಮ್ನಾಸ್ಟಿಕ್ಸ್ ಕ್ಲಾಸ್ ಮುಗಿದ ನಂತರ ಬಾಲಕಿಯನ್ನು ಕೊಠಡಿಯಲ್ಲೇ ಉಳಿಸಿಕೊಂಡು ಇಬ್ಬರೂ ಅತ್ಯಾಚಾರ ಎಸಗಿರುವುದು ತನಿಖೆಯಿಂದ ದೃಢಪಟ್ಟಿತ್ತು. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376, 202 ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಸೆಕ್ಷನ್ 4, 6 ಮತ್ತು 21ರ ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Related Articles

Comments (0)

Leave a Comment