ಕಾರು ಮಾರಾಟದಲ್ಲಿ ವಂಚನೆ ಆರೋಪ; ಪ್ರಕರಣ ರದ್ದುಕೋರಿ ಹೈಕೋರ್ಟ್ ಮೊರೆ ಹೋದ ಆಟೋಮೊಬೈಲ್ ಕಂಪನಿ ನಿರ್ದೇಶಕರು
- by LegalSamachar
- July 13, 2026
- 7 Views
ಬೆಂಗಳೂರು: ಹತ್ತು ದಿನಗಳ ಹಳೆಯ ವಾಹನ (ಕಾರ್) ಎಂದು ಹೇಳಿ 82 ದಿನಗಳ ಹಳೆಯ ಕಾರ್ ಮಾರಾಟ ಮಾಡಿದ ಆರೋಪದಲ್ಲಿ ದಾಖಲಾಗಿರುವ ದೂರು ರದ್ದು ಕೋರಿ ಆಟೋಮೊಬೈಲ್ಸ್ ಕಂಪನಿಯ ನಿರ್ದೇಶಕರು ಸಲ್ಲಿಸಿರುವ ಅರ್ಜಿ ಸಂಬಂಧ ವೈಯಾಲಿಕಾವಲ್ ಕಾವಲ್ ಠಾಣೆ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ನಗರದ 1ನೇ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಸ್ಯಾಂಕಿ ರಸ್ತೆಯ ಟ್ರೈಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸಮೀರ್ ಚೌಧರಿ ಹಾಗೂ ರಕ್ಷಿತ್ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, 82 ದಿನಗಳ ಹಳೆಯ ವಾಹನವನ್ನು 10 ದಿನಗಳ ವಾಹವನೆಂದು ತಿಳಿಸಿ ಏಕೆ ಮಾರಾಟ ಮಾಡಿದ್ದೀರಿ? ಎಂದು ಅರ್ಜಿದಾರರನ್ನು ಪ್ರಶ್ನಿಸಿತಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ವೈಯಾಲಿಕಾವಲ್ ಠಾಣೆ ಪೊಲೀಸರು ಹಾಗೂ ದೂರುದಾರಾದ ಕೆ.ಬಿ. ವೆಂಕಟೇಶ್ ಕುಮಾರ್‌ಗೆ (ಖರೀದಿದಾರ) ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಅರ್ಜಿದಾರರಿಂದ ವಾಹನ ಖರೀದಿಸಿದ್ದ ವ್ಯಕ್ತಿ ದಾಖಲಿಸಿರುವ ದೂರು ಇದಾಗಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಹೌದು ವಕೀಲರೇ.. ನಿಮ್ಮ ಅರ್ಜಿದಾರರು 82 ದಿನಗಳ ಹಳೆಯ ವಾಹನವನ್ನು 10 ದಿನಗಳ ವಾಹನವೆಂದು ತಿಳಿಸಿ ದೂರುದಾರರಿಗೆ ಏಕೆ ಮಾರಾಟ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಯಾವ ವಾಹನ ಲಭ್ಯವಿತ್ತೋ, ಅದನ್ನು ನೀಡಲಾಗಿದೆ ಎಂದರು. ಆಗ ನ್ಯಾಯಪೀಠ, ದಾಖಲೆಗಳಲ್ಲಿ ಆ ವಾಹನ ಕೇವಲ 10 ದಿನ ಹಳೆಯದು ಎಂದು ಹೇಗಿತ್ತು? ಎಂಬ ವಿಚಾರದ ಬಗ್ಗೆ ನಮಗೆ ಹೇಳಿ ಎಂದು ಕೇಳಿತು.
ಅರ್ಜಿದಾರರ ಪರ ವಕೀಲರು, ಆ ವಾಹನಕ್ಕಾಗಿ ಸ್ವತಃ ದೂರುದಾರರೇ ಬೇಡಿಕೆ ಇಟ್ಟಿದ್ದರು ಎಂದರು. ಆಗ ನ್ಯಾಯಪೀಠ, ಮೊಟ್ಟ ಮೊದಲಿಗೆ ನೀವು (ಅರ್ಜಿದಾರರು) ಇದೇ ರೀತಿಯಲ್ಲಿ ಹಳೆಯ ವಾಹನಗಳನ್ನು ಮಾರಾಟ ಮಾಡುತ್ತೀರಾ? ಟ್ರೈಡೆಂಟ್ ಹುಂಡೈ ಕಂಪನಿಯು ಹಳೆಯ ವಾಹನಗಳನ್ನು ಮಾರಾಟ ಮಾಡುತ್ತದೆಯೇ? ಈ ವಾಹನವನ್ನು ಹೇಗೆ ಮಾರಾಟ ಮಾಡಿದಿರಿ? ನೀವು 82 ದಿನಗಳ ಹಳೆಯ ವಾಹನಗಳನ್ನು 10 ದಿನಗಳ ಹಳೆಯ ವಾಹನವೆಂದು ಮಾರಾಟ ಮಾಡಿದ್ದೀರಿ. ಅದು ಏತಕ್ಕಾಗಿ? ಹಳೆಯ ವಾಹನವನ್ನು ಏಕೆ ಮಾರಾಟ ಮಾಡಿದ್ದೀರಿ? ಎಂದು ಮತ್ತೆ ಮತ್ತೆ ಪ್ರಶ್ನಿಸಿತು.
ಪ್ರಕರಣವೇನು?
ಅರ್ಜಿದಾರರಿಂದ 2025ರಲ್ಲಿ ವಾಹನ ಖರೀದಿಸಿದ್ದ ದೂರುದಾರ ವೆಂಕಟೇಶ್ ಕುಮಾರ್, 2025ರ ಅಕ್ಟೋಬರ್ 18ರಂದು 1ನೇ ಎಸಿಜೆಎಂ ಕೋರ್ಟ್ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರು 10 ದಿನಗಳ ಹಳೆಯ ವಾಹನವೆಂದು ತಿಳಿಸಿ ನನಗೆ 82 ದಿನಗಳ ಹಳೆಯ ವಾಹನವನ್ನು ಮಾರಾಟ ಮಾಡಿದ್ದಾರೆ. ಆ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ, ದೂರಿನೊಂದಿಗೆ ಲಗತ್ತಿಸಿದ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು (ವಾಟ್ಸ್ಆ್ಯಪ್ ಸಂದೇಶ, ಲೆಡ್ಜರ್ ರಿಪೋರ್ಟ್, ಇನ್ವಾಯ್ಸ್, ಪೊಲೀಸ್ ಆಯುಕ್ತರಿಗೆ ದೂರುದಾರರು ನೀಡಿದ ದೂರು, ಸ್ವೀಕೃತಪ್ರತಿ) ಪರಿಶೀಲಿಸಲಾಗಿದೆ. ತನಿಖೆಗೆ ಇದು ಅರ್ಹ ದೂರಾಗಿದೆ. ಅದರಂತೆ, ವೈಯಾಲಿಕಾವಲ್ ಠಾಣೆ ಪೊಲೀಸರು ದೂರಿನ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು 2026ರ ಜನವರಿ 8ರಂದು ನಿರ್ದೇಶನ ನೀಡಿತ್ತು. ಇದರಿಂದ, ತಮ್ಮ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)