ವಿಲ್ ದೃಢೀಕರಣಕ್ಕಾಗಿ ಅಮೆರಿಕದಿಂದಲೇ ವಿಸಿ ಮೂಲಕ ಹಾಜರಾಗಲು ವೃದ್ಧೆಗೆ ಹೈಕೋರ್ಟ್ ಅವಕಾಶ
- by Prashanth Basavapatna
- July 11, 2026
- 5 Views
ಬೆಂಗಳೂರು: ಉಯಿಲು (ವಿಲ್) ದೃಢೀಕರಣಕ್ಕಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಲು ಅಮೆರಿಕದಲ್ಲಿ ನೆಲೆಸಿರುವ 71 ವರ್ಷದ ವೃದ್ಧೆಗಾಗಿ ಹೈಕೋರ್ಟ್ನ ವಿಡಿಯೊ ಕಾನ್ಫರೆನ್ಸಿಂಗ್ (ವಿಸಿ) ನಿಯಮಗಳನ್ನು ಸಡಿಲಿಗೊಳಿಸಿ, ಅಲ್ಲಿಂದಲೇ ವಿಸಿ ಮೂಲಕ ಹಾಜರಾಗಿ ಹೇಳಿಕೆ ದಾಖಲಿಸಲು ವೃದ್ಧೆಗೆ ಅವಕಾಶ ಕಲ್ಪಿಸಲಾಗಿದೆ.
ಮೂಲತಃ ಬೆಂಗಳೂರಿನ ವರ್ತೂರು ರಸ್ತೆಯ ಸ್ಪೆಕ್ಟ್ರಾ ಸೈಪ್ರೆಸ್ ಅಪಾರ್ಟ್ಮೆಂಟ್ ನಿವಾಸಿ, ಸದ್ಯ ಅಮೆರಿಕದಲ್ಲಿ ನೆಲೆಸಿರುವ ರೇಖಾ ಗುಪ್ತ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ತಾರಾ ವಿತಾಸ್ತಾ ಗಂಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ನ್ಯಾಯಾಲಯಗಳ ವಿಡಿಯೊ ಕಾನ್ಫರೆನ್ಸಿಂಗ್ ನಿಯಮ-2020ರ ನಿಯಮ 18ರಡಿ ಲಭ್ಯವಿರುವ ಅಧಿಕಾರ ಬಳಸಿ ಭಾರತೀಯ ರಾಯಭಾರ ಕಚೇರಿಯ ಸೇವೆಯನ್ನು ಪಡೆಯದೇ ತಾವೇ ಸ್ವತಃ ವಿಸಿ ಮೂಲಕ ಹಾಜರಾಗಿ ಹೇಳಿಕೆ ದಾಖಲು ಮಾಡಲು ಅರ್ಜಿದಾರೆಗೆ ಹೈಕೋರ್ಟ್ ಅನುಮತಿ ನೀಡಿದೆ.
ನಿಯಮ 18ರಡಿ ವಿಸಿಯ ಯಾವುದೇ ನಿಯಮದಿಂದ ಕಕ್ಷಿದಾರರಿಗೆ ಕಷ್ಟವಾಗುತ್ತಿದ್ದರೆ, ಕೋರ್ಟ್ ಆದೇಶದ ಮೂಲಕ ಅದರಿಂದ ವಿನಾಯಿತಿ ನೀಡಬಹುದು ಅಥವಾ ಆ ನಿಯಮ ಸಡಿಲಗೊಳಿಸಬಹುದು ಎಂದು ಹೇಳಲಾಗಿದೆ. ಇದನ್ನು ಆಧರಿಸಿ ನ್ಯಾಯಾಲಯ, ಅರ್ಜಿದಾರೆಗೆ ಭಾರತೀಯ ರಾಯಭಾರ ಕಚೇರಿಯ ಸೇವೆಗಳನ್ನು ಪಡೆಯದೆಯೇ ತನ್ನ ಸಾಕ್ಷ್ಯ ದಾಖಲಿಸಲು ಅನುಮತಿ ಇದೆ ಹಾಗೂ ವಿಸಿ ನಿಯಮಗಳು 2020ರ ನಿಯಮ 5.1ರೊಂದಿಗೆ ಓದಲಾದ ನಿಯಮ 5.3.1ರ ಕಠಿಣತೆ ಸಡಿಲಿಸಲಾಗಿದೆ. ಆದರೆ, ಇದು ಸುರಕ್ಷತಾ ಕ್ರಮಗಳಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.
ಷರತ್ತುಗಳಿಗೆ ಒಳಪಟ್ಟು ಅನುಮತಿ:
ವಿಡಿಯೊ ಕಾನ್ಫರೆನ್ಸಿಂಗ್ ನಿಯಮಗಳ ನಿಯಮ 5.3.1 ವಿದೇಶಿ ನಿವಾಸಿಗಳು ಭಾರತೀಯ ರಾಯಭಾರ ಕಚೇರಿಯ ಮೂಲಕ ವಿಚಾರಣೆ ನಡೆಸುವುದು ಕಡ್ಡಾಯಗೊಳಿಸುತ್ತದೆ. ಸುರಕ್ಷತಾ ಕ್ರಮಗಳಿಗೆ ಒಳಪಟ್ಟು ಮೂರು ಷರತ್ತುಗಳನ್ನು ವಿಧಿಸಿದೆ, ಮೊದಲನೆಯದಾಗಿ ಅರ್ಜಿದಾರರು ತಮ್ಮ ಸಾಕ್ಷ್ಯ ದಾಖಲಿಸುವಾಗ ಸಂಪರ್ಕ ಕಡಿತಗೊಳಿಸುವುದಿಲ್ಲ ಅಥವಾ ಯಾವುದೇ ಅಡಚಣೆ ಅನುಮತಿಸುವುದಿಲ್ಲ ಎಂದು ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಬೇಕು. ಎರಡನೆಯದಾಗಿ ಯಾವುದೇ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ, ಅವರು ನೀಡಿದ ಸಂಪೂರ್ಣ ಸಾಕ್ಷ್ಯ ತಿರಸ್ಕರಿಸಲಾಗುತ್ತದೆ. ಮೂರನೇಯದಾಗಿ ವಿಚಾರಣೆಯ ನ್ಯಾಯಸಮ್ಮತತೆ ಮತ್ತು ಸಮಗ್ರತೆ ಖಚಿತಪಡಿಸಿಕೊಳ್ಳಲು ಅಗತ್ಯವೆಂದು ಪರಿಗಣಿಸಬಹುದಾದ ಯಾವುದೇ ಹೆಚ್ಚುವರಿ ಸುರಕ್ಷತೆಗಳನ್ನು ವಿಧಿಸಲು ವಿಚಾರಣಾ ನ್ಯಾಯಾಲಯವು ಸ್ವಾತಂತ್ರ್ಯ ಹೊಂದಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಪ್ರಕರಣವೇನು?
ಅರ್ಜಿದಾರೆಯ ಪತಿ 2024ರಲ್ಲಿ ನಿಧನ ಹೊಂದಿದ್ದು, ಸಾಯುವ ಮುನ್ನ ಅವರು ಬರೆದಿದ್ದ ವಿಲ್ನಲ್ಲಿ ಅವರ ಎಲ್ಲ ಆಸ್ತಿಗಳನ್ನು ಅರ್ಜಿದಾರೆ ಪರವಾಗಿ ನೀಡಲಾಗಿದೆ. ಇದರಿಂದ, ಭಾರತೀಯ ಉತ್ತರಾಧಿಕಾರ ಕಾಯ್ದೆ 1925ರ ಸೆಕ್ಷನ್ 276ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ವೃದ್ಧೆ, ಉಯಿಲನ್ನು ದೃಢೀಕರಣ ಮಾಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಸದ್ಯ ಅಮೆರಿಕದಲ್ಲಿ ನೆಲೆಸಿರುವ ಅರ್ಜಿದಾರೆ, ಅಲ್ಲಿನ ಖಾಯಂ ನಿವಾಸಿ (ಗ್ರೀನ್ ಕಾರ್ಡ್ ಹೋಲ್ಡರ್) ಆಗಿರುವುದರಿಂದ ಅವರ ಭಾರತ ಪ್ರಯಾಣಕ್ಕೆ ಕೆಲವು ನಿಬಂಧನೆಗಳಿವೆ. ಆದ್ದರಿಂದ, ವಿಸಿ ಮೂಲಕ ಅಮೆರಿಕದಿಂದಲೇ ನ್ಯಾಯಾಲಯದ ಮುಂದೆ ಹಾಜರಾಗಲು ಅನುಮತಿ ಕೋರಿದ್ದರು. ಆದರೆ, ವಿಚಾರಣಾ ನ್ಯಾಯಾಲಯ ವಿಸಿ ಮೂಲಕ ಹಾಜರಾಗಲು ಅನುಮತಿ ನಿರಾಕರಿಸಿತ್ತು. ಇದರಿಂದ ಅರ್ಜಿದಾರೆ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)