ಎಚ್ಡಿಕೆ-ಚಂದ್ರಶೇಖರ್ ಪ್ರಕರಣ; ಮಧ್ಯಸ್ಥಿಕೆಗೆ ನಿವೃತ್ತ ನ್ಯಾ. ಎ.ಎಸ್. ಓಕ್ ನೇಮಿಸಿದ ಹೈಕೋರ್ಟ್
- by Jagan Ramesh
- April 16, 2026
- 6 Views
ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆಯೊಡ್ಡಿದ ಆರೋಪ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಓಕ್ ಅವರನ್ನು ಹೈಕೋರ್ಟ್ ನೇಮಕ ಮಾಡಿದೆ.
ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕಳೆದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಓಕ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸುವುದಾಗಿ ಹೇಳಲಾಗಿತ್ತು. ಇದಕ್ಕೆ ಉಭಯ ಪಕ್ಷಕಾರರು ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ, ನ್ಯಾಯಮೂರ್ತಿ ಓಕ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲಾಗಿದೆ. ಗೌರವಧನ ಮತ್ತು ವೆಚ್ಚದ ಕುರಿತು ಪಕ್ಷಕಾರರು ನಿರ್ಧರಿಸಿಕೊಳ್ಳಬಹುದು. ಮಧ್ಯಸ್ಥಿಕೆ ಸ್ಥಳ ಮತ್ತು ಇತರ ವಿಚಾರಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದು ನ್ಯಾಯಪೀಠ ಆದೇಶಿಸಿತು.
ಈ ನಡುವೆ, ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು, ಮಧ್ಯಸ್ಥಿಕೆದಾರರು ಉಭಯ ಪಕ್ಷಕಾರರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ, ಚರ್ಚಿಸಬೇಕು ಎಂದರು. ಇದಕ್ಕೆ ನ್ಯಾಯಪೀಠ, ಮಧ್ಯಸ್ಥಿಕೆದಾರರು ಎಲ್ಲವನ್ನೂ ನಿಭಾಯಿಸಲಿದ್ದಾರೆ. ಏತಕ್ಕಾಗಿ ಈ ಪ್ರಕರಣವನ್ನು ಅವರಿಗೆ ಕಳುಹಿಸಲಾಗಿದೆ ಎಂಬುದು ಗೊತ್ತಿರುತ್ತದೆ. ಸ್ಥಳವನ್ನು ಅವರು ನಿಗದಿ ಮಾಡುತ್ತಾರೆ. ಇದು ಮತ್ತೆ ಇಲ್ಲಿಗೆ ಬರುವುದಿಲ್ಲ ಎಂಬ ವಿಶ್ವಾಸ ಹೊಂದೋಣ ಎಂದು ಹೇಳಿತು.
ವಿಚಾರಣೆಗೂ ಮುನ್ನ ನ್ಯಾಯಪೀಠ, ಕೆಲ ಪ್ರಕರಣಗಳು ನ್ಯಾಯಾಲಯ ವಿಚಾರಣೆ ನಡೆಸಿಯೇ ಇತ್ಯರ್ಥಪಡಿಸುವ ಅವಶ್ಯತೆ ಇಲ್ಲ. ಸಂಧಾನದ ಮೂಲಕ ಇತ್ಯರ್ಥಪಡಿಸಬಹುದು. ಈ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಬಹುದಾಗಿದೆ. ಆ ಕಾರಣಕ್ಕೆ ಮಧ್ಯಸ್ಥಿಕೆದಾರ ನೇಮಕಕ್ಕೆ ನ್ಯಾಯಾಲಯ ಸಲಹೆ ನೀಡಿತ್ತು ಎಂದು ಹೇಳಿತು.
Related Articles
Thank you for your comment. It is awaiting moderation.



Comments (0)