ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿ; ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
- by Jagan Ramesh
- April 16, 2026
- 143 Views
ಬೆಂಗಳೂರು: ‘ಸ್ವಯಂ-ಗುರುತಿಸುವಿಕೆ’ಯ ಹಕ್ಕನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ‘ತೃತೀಯ ಲಿಂಗಿ ವ್ಯಕ್ತಿ’ಯ ಕಾನೂನು ವ್ಯಾಖ್ಯಾನದಿಂದ ಹೊರಗಿಡುವ ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷ ಣೆ) ತಿದ್ದುಪಡಿ ಕಾಯ್ದೆ-2026 ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಕೇಂದ್ರ ಸರ್ಕಾರದಿಂದ ಹೈಕೋರ್ಟ್ ಪ್ರತಿಕ್ರಿಯೆ ಕೋರಿದೆ.
ಕೆಲವು ವರ್ಷಗಳಿಂದ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುತ್ತಿರುವ ಲಿಂಗಪರಿವರ್ತಿತ ತೃತೀಯ ಲಿಂಗಿ ಮಾಯಾ ಹಾಗೂ ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿ ಲಿಂಗಪರಿರ್ತನೆ ಮಾಡಿಕೊಂಡು ತನ್ನ ಅಧಿಕೃತ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ತೃತೀಯ ಲಿಂಗಿ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2019ರ ಕಾಯ್ದೆಯ ಸೆಕ್ಷನ್ 2(ಕೆ) ಅಡಿಯಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿ’ ಎಂಬ ವ್ಯಾಖ್ಯಾನದಿಂದ ಮೊದಲನೇ ಅರ್ಜಿದಾರರನ್ನು ಹೊರಗಿಟ್ಟಿರುವುದರಿಂದ ಅವರಿಗೆ ಯಾವ ಸೇವೆಗಳೂ ಸಿಗುವುದಿಲ್ಲ. ಎರಡನೇ ಅರ್ಜಿದಾರರು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅವರ ಅಧಿಕೃತ ದಾಖಲೆಗಳನ್ನು ಆದ್ಯತೆಯ ಮೇರೆಗೆ ನವೀಕರಿಸಬೇಕು ಎಂದು ಕೋರಿದರು.
ಮೊದಲನೇ ಅರ್ಜಿದಾರರು ಫೆಬ್ರವರಿಯಲ್ಲಿ ತಮ್ಮ ಔಷಧಿ ಪ್ರಿಸ್ಕ್ರಿಪ್ಷನ್ ಪಡೆದಿದ್ದು, ಮತ್ತೀಗ ಅದನ್ನು ಶೀಘ್ರದಲ್ಲೇ ನವೀಕರಿಸಬೇಕು. ಆದರೂ ಸಹ 2026ರ ತಿದ್ದುಪಡಿ ಜಾರಿಗೆ ಬಂದ ನಂತರ ಈ ಸೇವೆಗಳು ಅವರಿಗೆ ಲಭ್ಯವಿಲ್ಲದಿರಬಹುದು. ಆದ್ದರಿಂದ, ಚಿಕಿತ್ಸೆಯನ್ನು ಮುಂದುವರಿಸಲು ಮಧ್ಯಂತರ ಆದೇಶ ನೀಡಬೇಕು ಮತ್ತು ಆಕ್ಷೇಪಾರ್ಹ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ನಂತರ ಪರಿಶೀಲಿಸಬಹುದು ಎಂದರು.
ಕೇಂದ್ರ ಸರ್ಕಾರದ ಪರ ವಕೀಲರು ಯಾವುದೇ ಮಧ್ಯಂತರ ಪರಿಹಾರ ನೀಡುವುದನ್ನು ಆಕ್ಷೇಪಿಸಿದರಲ್ಲದೆ, ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿರುವ ಎರಡನೇ ಅರ್ಜಿದಾರರ ಆಧಾರ್, ಪ್ಯಾನ್ ಇತ್ಯಾದಿಗಳ ದಾಖಲೆಗಳನ್ನು ರದ್ದುಗೊಳಿಸಲು ಈವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಅದೇ ರೀತಿ, ಯಾವುದೇ ವೈದ್ಯರು ಮೊದಲ ಅರ್ಜಿದಾರರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅರ್ಜಿದಾರರು ಹಾನಿಯಾಗುತ್ತದೆಂದು ಹೇಳುತ್ತಿರುವುದು ‘ನಿರೀಕ್ಷಿತ’ ಸ್ವರೂಪದ್ದಾಗಿದ್ದು, ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದೆ ಯಾವುದೇ ಮಧ್ಯಂತರ ಪರಿಹಾರ ನೀಡಬಾರದು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಕೇಂದ್ರ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)