ಪತಿ ಕೊಲೆಯತ್ನ ಆರೋಪ; ಪತ್ನಿ, ಆಕೆಯ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
- by Jagan Ramesh
- April 16, 2026
- 152 Views
ಬೆಂಗಳೂರು: ಕೌಟುಂಬಿಕ ಕಲಹ ಇತ್ಯರ್ಥಕ್ಕಾಗಿ ಮಾತುಕತೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಮನೆಯ ಮೆಟ್ಟಿಲುಗಳ ಮೇಲಿಂದ ತಳ್ಳಿ ಪತಿಯ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಮಹಿಳೆ ಮತ್ತವರ ಕುಟುಂಬದ 7 ಮಂದಿ ಸದಸ್ಯರ ವಿರುದ್ಧ ಪತಿ ದಾಖಲಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಶಿವಮೊಗ್ಗದ ಪೂಜಾ (ದೂರುದಾರನ ಪತ್ನಿ) ಮತ್ತವರ ಕಟುಂಬದ 7 ಮಂದಿ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಪತ್ನಿ ಪೂಜಾ ಪರ ವಕೀಲರ ವಾದ ಹಾಗೂ ಪತಿ ಬಿ.ಆರ್. ಯೋಗೀಶ್ ಅವರು ಖುದ್ದು ಹಾಜರಾಗಿ ಮಂಡಿಸಿದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿತು.
ಪತ್ನಿ ವಿರುದ್ಧ ಕೊಲೆಯತ್ನ ಆರೋಪ ಮಾಡಿದ ಪತಿ:
ಅರ್ಜಿ ವಿಚಾರಣೆಗೆ ಬಂದಾಗ ಪೂಜಾ ಪತಿ ಯೋಗೀಶ್ ಖುದ್ದು ಹಾಜರಾಗಿ, ಸ್ವಾಮಿ.. ಪತ್ನಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದರು. ಅದರಿಂದ ಆಶ್ಚರ್ಯಗೊಂಡ ನ್ಯಾಯಮೂರ್ತಿಗಳು, ಕೊಲೆ ಯತ್ನವೇ? ಯಾರ ಮೇಲೆ? ಎಂದು ಪ್ರಶ್ನಿಸಿದರು.
ಯೋಗೀಶ್ ಉತ್ತರಿಸಿ, ಸ್ವಾಮಿ.. ನನ್ನ ಮೇಲೆಯೇ. ಪತ್ನಿ ಒಮ್ಮೆ ನನ್ನನ್ನು ಮೆಟ್ಟಿಲುಗಳ ಮೇಲಿಂದ ಕೆಳಗೆ ತಳ್ಳಿ ಕೊಲೆಗೆ ಯತ್ನಿಸಿದರು. ಘಟನೆಯಲ್ಲಿ ನನ್ನ ಎಡಗೈಗೆ ತೀವ್ರ ಗಾಯವಾಗಿತ್ತು. ಕೈಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಎರಡನೆ ಬಾರಿಗೆ ಅರ್ಜಿದಾರ ಆರೋಪಿಗಳಾದ ಎಂಟು ಜನ ನನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನನ್ನನ್ನು ಸಾಯಿಸಲು ಯತ್ನಿಸಿದರು. ಶಸ್ತ್ರಚಿಕಿತ್ಸೆಯಾಗಿರುವ ನನ್ನ ಕೈಯನ್ನು ಪತ್ನಿ ಹಿಡಿದು ಎಳೆದಾಡಿದರು. ಪೊಲೀಸರು ಸಹ ಪೂರ್ಣ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ತಿಳಿಸಿದರು.
ಅರ್ಜಿದಾರರ ಪರ ವಕೀಲರು, ಯೋಗೀಶ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಅರ್ಜಿದಾರರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸೇರಿ ವಿವಿಧ ಅಪರಾಧಗಳ ಸಂಬಂಧ ದೂರು ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಯೋಗೀಶ್ ಪತ್ನಿ ಮತ್ತವರ ಕುಟುಂಬ ಸದಸ್ಯರು (ಅರ್ಜಿದಾರರ) ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ಮಧ್ಯಪ್ರವೇಶಿಸಿದ ಯೋಗೀಶ್, ಸ್ವಾಮಿ.. ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಸಾಕ್ಷ್ಯಗಳನ್ನೆಲ್ಲಾ ಬದಲಾಯಿಸಿದ್ದಾರೆ ಎಂದು ದೂರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿಗೆ ಮೊದಲು ನೀವು (ಯೋಗೀಶ್) ಆಕ್ಷೇಪಣೆ ಸಲ್ಲಿಸಿ. ನಂತರ ಪೂರ್ಣ ಪ್ರಮಾಣದ ವಿಚಾರಣೆ ನಡೆಸೋಣ. ಅಲ್ಲಿಯವರೆಗೆ ನಿಮ್ಮ ದೂರಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗುವುದು ಎಂದು ತಿಳಿಸಿ ಆ ಕುರಿತು ಮಧ್ಯಂತರ ಆದೇಶ ಮಾಡಿತು.
ಅರ್ಜಿದಾರರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ, ಅಕ್ರಮ ಕೂಟ, ಕಾನೂನುಬಾಹಿರ ಸಭೆ, ಹಲ್ಲೆ ಮತ್ತು ಮನೆಯ ಅತಿಕ್ರಮ ಪ್ರವೇಶ ಸೇರಿ ಹಲವು ಅಪರಾಧ ಕೃತ್ಯಗಳ ಆರೋಪದಡಿ ಪತಿ ಯೋಗೀಶ್ 2024ರ ನವೆಂಬರ್ 15ರದು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿವಮೊಗ್ಗದ 5ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದೆ.
Related Articles
Thank you for your comment. It is awaiting moderation.


Comments (0)