ಅಕ್ರಮ ಬಂಧನಕ್ಕೊಳಗಾಗಿದ್ದ ಹೋಂಸ್ಟೇ ಮಾಲೀಕರಿಗೆ 5 ಲಕ್ಷ ರೂ. ಪರಿಹಾರ ಪಾವತಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಕೊಡಗಿನ ಹೋಂಸ್ಟೇ ಒಂದರಲ್ಲಿ ಅಮೆರಿಕದ ಪ್ರವಾಸಿ ಮಹಿಳೆಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಸಂಬಂಧ ಹೋಮ್‌ ಸ್ಟೇ ಮಾಲೀಕರನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಕುಟ್ಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಹೋಂಸ್ಟೇ ಮಾಲಿಕ ಪಾಲೇಕಂಡ ಪೊನ್ನಪ್ಪ ಅಲಿಯಾಸ್‌ ವಿಶಾಲ್‌ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಆದರೆ, ಈ ಹಂತದಲ್ಲಿ ಅರ್ಜಿದಾರರ ವಿರುದ್ಧ ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿರುವ ನ್ಯಾಯಾಲಯ ತನಿಖೆ ಮುಂದುವರಿಯುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣ ತನಿಖಾ ಹಂತದಲ್ಲಿರುವಾಗ ಹಸ್ತಕ್ಷೇಪದ ಅಗತ್ಯವಿಲ್ಲ. ಆದರೆ, ಅರ್ಜಿದಾರರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಲಾಗುತ್ತಿದೆ. ಅರ್ಜಿದಾರರು ಅಂತಹ ಅಕ್ರಮ ಬಂಧನಕ್ಕೆ ಪರಿಹಾರ ಪಡೆಯಲು ಅರ್ಹರಾಗುತ್ತಾರೆ. ಅರ್ಜಿದಾರರು 5 ಲಕ್ಷ ರೂ. ಪರಿಹಾರಕ್ಕೆ ಅರ್ಹರಾಗಿದ್ದಾರೆ. ನ್ಯಾಯಾಲಯದ ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ 4 ವಾರಗಳಲ್ಲಿ ರಾಜ್ಯ ಸರ್ಕಾರ ಅರ್ಜಿದಾರರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು ಯಾವುದೇ ಅತ್ಯಾಚಾರವೆಸಗಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಎಫ್‌ಐಆರ್‌ನಲ್ಲಿ ಆರೋಪಿಸದಿದ್ದರೂ ನಂತರದ ಹಂತದಲ್ಲಿ ‘ಸಾಮಾನ್ಯ ಉದ್ದೇಶ’ ಎಂಬ ಅಂಶವನ್ನು ಸೇರಿಸಿ ಬಂಧಿಸಲಾಗಿದೆ. ಅಲ್ಲದೆ, ಘಟನೆಯ ಸಮಯದಲ್ಲಿ ಅವರು ಹೋಂಸ್ಟೇನಲ್ಲಿ ಇರಲಿಲ್ಲ ಎಂಬುದಕ್ಕೆ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಒದಗಿಸಲಾಗುವುದು ಎಂದು ವಾದ ಮಂಡಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರರು ಸಂತ್ರಸ್ತೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ದಿನಗಳ ಕಾಲ ಹೋಂಸ್ಟೇನಲ್ಲಿ ಉಳಿಯುವಂತೆ ಒತ್ತಾಯಿಸಿದ್ದರು ಮತ್ತು ಹೊರಗಿನವರೊಂದಿಗೆ ಸಂಪರ್ಕ ಸಾಧಿಸದಂತೆ ತಡೆ ಹಿಡಿದಿದ್ದರೆಂಬ ಆರೋಪವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರಕರಣವೇನು?
ಅರ್ಜಿದಾರರ ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕ ಅಮೆರಿಕದ ಪ್ರವಾಸಿ ಮಹಿಳೆಗೆ ಮತ್ತು ಬರುವ ಪದಾರ್ಥ ಹಾಕಿ ಪಾನೀಯ ನೀಡಿದ್ದು, ಅದನ್ನು ಸೇವಿಸಿದ ಆಕೆ ಪ್ರಜ್ಞೆ ತಪ್ಪಿದ್ದರು. ಈ ಸಂದರ್ಭದಲ್ಲಿ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನೆಂಬ ಆರೋಪವಿದೆ. ಸದ್ಯ ಆರೋಪಿ ಜೈಲಿನಲ್ಲಿದ್ದು, ವಿಚಾರಣಾ ನ್ಯಾಯಾಲಯ ಆತನಿಗೆ ಜಾಮೀನು ನಿರಾಕರಿಸಿದೆ.

ಈ ಪ್ರಕರಣದ ಮಾಹಿತಿ ಮುಚ್ಚಿಟ್ಟ ಆರೋಪದಲ್ಲಿ ಹೋಂಸ್ಟೇ ಮಾಲೀಕ ಪೊನ್ನಪ್ಪ ಅವರನ್ನು ಪೊಲೀಸರು ಏಪ್ರಿಲ್‌ 19ರಂದು ಬಂಧಿಸಿದ್ದರು. ಅವರಿಗೆ ಮೇ 2ರಂದು ಜಾಮೀನು ಮಂಜೂರಾಗಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಹೋಂಸ್ಟೇ ಮಾಲೀಕರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಹಾಗೂ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿ, ಅಕ್ರಮವಾಗಿ ಬಂಧಿಸಿರುವುದಕ್ಕೆ 15 ಲಕ್ಷ ರೂ. ಪರಿಹಾರ ಕೋರಿದ್ದರು.

Related Articles

Comments (0)

Leave a Comment