ಅಮಾನತು ಆದೇಶ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಅರ್ಜಿ; ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್
- by LegalSamachar
- July 14, 2026
- 4 Views
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿರುವ ಕ್ರಮ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೆಪಿಎಸ್ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿ ಜುಲೈ 13ರಂದು ರಾಜ್ಯಪಾಲರು ಹೊರಡಿಸಿರುವ ಆದೇಶ ಪ್ರಶ್ನಿಸಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಹಾಗೂ ಕೆಪಿಎಸ್ಸಿ ಕಾಯರ್ದರ್ಶಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಸಂವಿಧಾನದ ಪರಿಚ್ಛೇದ 317ರ ಪ್ರಕಾರ, ರಾಷ್ಟ್ರಪತಿಗಳು ಸುಪ್ರೀಂಕೋರ್ಟ್ಗೆ ತನಿಖೆಗೆ ಆದೇಶಿಸಿದ ನಂತರವಷ್ಟೇ ಅಥವಾ ಸುಪ್ರೀಂಕೋರ್ಟ್ ವಿಚಾರಣೆ ನಡೆಸುವ ಸಂದರ್ಭದಲ್ಲಿ ಮಾತ್ರವೇ ಅಧ್ಯಕ್ಷರನ್ನು ಅಮಾನತುಗೊಳಿಸಲು ಅವಕಾಶವಿರುತ್ತದೆ. ಆದರೆ, ಈ ಪ್ರಕರಣದಲ್ಲಿ ರಾಷ್ಟ್ರಪತಿಗಳು ಇನ್ನೂ ಸುಪ್ರೀಂಕೋರ್ಟ್ನಿಂದ ಯಾವುದೇ ಅಧಿಕೃತ ತನಿಖೆಗೆ ಆದೇಶಿಸಿಲ್ಲ. ಆದ್ದರಿಂದ, ರಾಷ್ಟ್ರಪತಿಗಳ ಉಲ್ಲೇಖಕ್ಕೂ ಮುನ್ನವೇ ಹೊರಡಿಸಲಾಗಿರುವ ರಾಜ್ಯಪಾಲರ ಈ ಅಮಾನತು ಆದೇಶ ಕಾನೂನುಬದ್ಧವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಮಾನತು ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು.
ರಾಜ್ಯಪಾಲರ ಪರ ಹಾಜರಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ರಾಜ್ಯಪಾಲರು ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಗಾಗಿ ರಾಷ್ಟ್ರಪತಿಗಳಿಗೆ ಅಧಿಕೃತವಾಗಿ ಕೋರಿಕೆ (ಶಿಫಾರಸು) ಕಳುಹಿಸಿಕೊಟ್ಟಿದ್ದಾರೆ. ರಾಷ್ಟ್ರಪತಿಗಳಿಗೆ ಒಮ್ಮೆ ಶಿಫಾರಸು ಕಳುಹಿಸಿದ ನಂತರ, ತನಿಖೆ ಬಾಕಿ ಇರುವ ಅವಧಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಮಾನತುಪಡಿಸುವ ಸಂಪೂರ್ಣ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ ಎಂದು ಅಮಾನತು ಕ್ರಮವನ್ನು ಸಮರ್ಥಿಸಿಕೊಂಡರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಾಲಿ ಪ್ರಕರಣದಲ್ಲಿ ರಾಷ್ಟ್ರಪತಿಗಳು ಸಂವಿಧಾನದ ಪರಿಚ್ಛೇದ 317ರ ಕ್ಲಾಸ್ (ಕಂಡಿಕೆ) 2ರ ಅಡಿಯಲ್ಲಿ ಸುಪ್ರೀಂಕೋರ್ಟ್ಗೆ ಶಿಫಾರಸು ಕಳುಹಿಸುವ ಮುನ್ನವೇ, ಆಯೋಗದ ಅಧ್ಯಕ್ಷರನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಅಧಿಕಾರವಿತ್ತೇ ಅಥವಾ ಇಲ್ಲವೇ ಎಂಬದನ್ನು ಪರಿಶೀಲಿಸಬೇಕಿದೆ. ಆದ್ದರಿಂದ, ಎಲ್ಲ ವಕೀಲರು ತಾವು ಈ ವಿಷಯದಲ್ಲಿ ಅವಲಂಬಿತವಾಗಿರುವ ತೀರ್ಪುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)