- ಟ್ರಯಲ್ ಕೋರ್ಟ್
- Like this post: 60
ಯೋಗೀಶ ಗೌಡರ್ ಕೊಲೆ ಪ್ರಕರಣ; ವಿನಯ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
- by Jagan Ramesh
- April 17, 2026
- 38 Views
ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸೇರಿ 16 ಮಂದಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷ ವಿಧಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ವಿನಯ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು ಎದುರಾಗಿದೆ.
ದಶಕದ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯ ಅಪರಾಧಗಳಿಗೆ 17 ಮಂದಿಯನ್ನು ದೋಷಿಗಳೆಂದು ತೀರ್ಮಾನಿಸಿ ಏಪ್ರಿಲ್ 15ರಂದು ತೀರ್ಪು ಪ್ರಕಟಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಶುಕ್ರವಾರ ಎಲ್ಲ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.
ಯಾವ ಅಪರಾಧಕ್ಕೆ ಯಾವ ಶಿಕ್ಷೆ?
ಐಪಿಸಿ ಸೆಕ್ಷನ್ 302 (ಕೊಲೆ) ಜತೆಗೆ 120ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಕ್ರಮ್ ಬಳ್ಳಾರಿ (ಎ2), ಕೀರ್ತಿಕುಮಾರ್ ಬಸವರಾಜ ಕುರಹಟ್ಟಿ (ಎ3), ಸಂದೀಪ್ ಸವದತ್ತಿ (ಎ4), ವಿನಾಯಕ ಕಟಗಿ (ಎ5), ಮಹಾಬಲೇಶ್ವರ ಹೊಂಗಲ್ ಅಲಿಯಾಸ್ ಮುದುಕ (ಎ6), ಸಂತೋಷ್ ಸವದತ್ತಿ (ಎ7), ಎಂ. ದಿನೇಶ್ (ಎ8), ಅಶ್ವತ್ (ಎ9), ಸುನೀಲ್ (ಎ10), ನಜೀರ್ ಅಹಮದ್ (ಎ11), ಶಹನವಾಜ್ (ಎ12), ನೂತನ್ (ಎ13), ಹರ್ಷಿತ್ (ಎ14), ವಿನಯ ಕುಲಕರ್ಣಿ (ಎ15), ಚಂದ್ರಶೇಖರ್ ಇಂಡಿ (ಎ16) ಹಾಗೂ ವಿಕಾಸ್ ಕಲ್ಬುರ್ಗಿಗೆ (ಎ18) ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರೂ. ದಂಡ ವಿಧಿಸಿದೆ.
ಇದಲ್ಲದೆ, ಐಪಿಸಿ ಸೆಕ್ಷನ್ 143 (ಅಕ್ರಮ ಕೂಟ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ 2 ರಿಂದ 14 ಹಾಗೂ 18ನೇ ಆರೋಪಿಗಳಿಗೆ ತಲಾ 2 ಸಾವಿರ ರೂ. ದಂಡದೊಂದಿಗೆ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ, ಐಪಿಸಿ ಸೆಕ್ಷನ್ 147 (ಗಲಭೆ) ಜತೆಗೆ 120ಬಿ ಅಡಿಯ ಅಪರಾಧಕ್ಕಾಗಿ ಆರೋಪಿ ಸಂಖ್ಯೆ 2 ರಿಂದ 14 ಹಾಗೂ 18ನೇ ಆರೋಪಿಗೆ ತಲಾ 2 ಸಾವಿರ ರೂ. ದಂಡದೊಂದಿಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಐಪಿಸಿ ಸೆಕ್ಷನ್ 148 (ಮಾರಕಾಸ್ತ್ರ ಹಿಡಿದು ಗಲಭೆ) ಜತೆಗೆ 120ಬಿ ಅಡಿಯಲ್ಲಿನ ಅಪರಾಧ ಕೃತ್ಯಕ್ಕಾಗಿ 2 ರಿಂದ 14 ಮತ್ತು 18ನೇ ಆರೋಪಿಗಳಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರೂ. ಜುಲ್ಮಾನೆ ವಿಧಿಸಲಾಗಿದ್ದು, ಐಪಿಸಿ ಸೆಕ್ಷನ್ 120ಬಿ (ಪಿತೂರಿ) ಅಡಿಯಲ್ಲಿನ ಅಪರಾಧಕ್ಕಾಗಿ 2 ರಿಂದ 16 ಹಾಗೂ 18ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಚನ್ನಕೇಶವ ಟಿಂಗರೀಕರ್‌ಗೆ (ಎ19) ಐಪಿಸಿ ಸೆಕ್ಷನ್ 218 (ಸರ್ಕಾರಿ ಅಧಿಕಾರಿಯು ವ್ಯಕ್ತಿಯನ್ನು ಶಿಕ್ಷೆಯಿಂದ ಅಥವಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ರಕ್ಷಿಸುವ ಉದ್ದೇಶದಿಂದ ತಪ್ಪಾದ ದಾಖಲೆ ರಚಿಸುವುದು) ಅಡಿಯಲ್ಲಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಲಾಗಿದ್ದರೆ, ಐಪಿಸಿ ಸೆಕ್ಷನ್ 201 (ಅಪರಾಧದ ಸಾಕ್ಷ್ಯಗಳು ಕಣ್ಮರೆಯಾಗಲು ಕಾರಣವಾಗುವುದು ಅಥವಾ ಅಪರಾಧಿಯನ್ನು ರಕ್ಷಿಸಲು ಸುಳ್ಳು ಮಾಹಿತಿ ನೀಡುವುದು) ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ, 2 ರಿಂದ 16, 18 ಮತ್ತು 19ನೇ ಆರೋಪಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ.
ಇನ್ನು ಐಪಿಸಿ ಸೆಕ್ಷನ್ 218 ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ ಎ19 ಚೆನ್ನಕೇಶವ ಟಿಂಗರೀಕರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಮೇಲಿನ ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಯಾವ ಆರೋಪದಿಂದ ಯಾರ್ಯಾರು ಖುಲಾಸೆ?
• ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 25 ಜತೆಗೆ 3, 5, 8 ಮತ್ತು 29ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಂದ ವಿನಯ ಕುಲಕರ್ಣಿ ಹಾಗೂ ಚಂದ್ರಶೇಖರ್ ಇಂಡಿ ಅವರನ್ನು ಖುಲಾಸೆಗೊಳಿಸಲಾಗಿದೆ.
• ವಾಸುದೇವ ರಾಮ ನಿಲೇಕಣಿ (ಎ20) ಅವರನ್ನು ಸೆಕ್ಷನ್ 201 ಜತೆಗೆ 120ಬಿ ಹಾಗೂ 218ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧದಿಂದ ಖುಲಾಸೆಗೊಳಿಸಲಾಗಿದೆ.
• ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 13(1)(ಡಿ) ಜತೆಗೆ 13(2)ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಂದ ಚೆನ್ನಕೇಶವ ಟಿಂಗರೀಕರ್ ಹಾಗೂ ವಾಸುದೇವ ರಾಮ ನಿಲೇಕಣಿ ಅವರನ್ನು ಖುಲಾಸೆಗೊಳಿಸಲಾಗಿದೆ.
• ಸೋಮಶೇಖರ್ ಬಸಪ್ಪ ನ್ಯಾಮನಗೌಡ (ಎ21) ಅವರನ್ನು ಐಪಿಸಿ ಸೆಕ್ಷನ್ 120ಬಿ ಹಾಗೂ 302 ಅಡಿಯಲ್ಲಿನ ಶಿಕ್ಷಾರ್ಹ ಅಪರಾಧದಿಂದ ಖುಲಾಸೆಗೊಳಿಸಲಾಗಿದೆ.
• ಮಾಫಿ ಸಾಕ್ಷಿಯಾಗಿದ್ದ (ಅಪ್ರೂವರ್) ಮೊದಲನೇ ಆರೋಪಿ ಬಸವರಾಜ ಮುತ್ತಗಿಗೆ ನೀಡಲಾಗಿದ್ದ ಕ್ಷಮಾದಾನವನ್ನು ಕಾಯಂಗೊಳಿಸಲಾಗಿದೆ.
ಶ್ರೀಶೈಲ ಬಿರಾದಾರ್ ವಿರುದ್ಧ ಕ್ರಮಕ್ಕೆ ಅವಕಾಶ:
ಪ್ರಕರಣದಲ್ಲಿ ಮೊದಲು ಮಾಫಿ ಸಾಕ್ಷಿಯಾಗಿ ಆನಂತರ ನ್ಯಾಯಾಲಯದ ಮುಂದೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ (ಹಾಸ್ಟೈಲ್) ಶಿವಾನಂದ ಶ್ರೀಶೈಲ ಬಿರಾದಾರ್ (ಎ17) ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅಗತ್ಯ ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ಅವಕಾಶ ನೀಡಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಹಾಗೂ ಇತರ ಸ್ವತಂತ್ರ ಸಾಕ್ಷಿಗಳಾದ ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್, ವಿನಾಯಕ ಬಿಂಜಿಯವರ್, ಮೋಹನ್ ಈಚರಪ್ಪ ಮಲ್ಮುತ್ತಲ್, ವಿವೇಕಾನಂದ ದಳವಾಯಿ, ನಟರಾಜ್ ಸರದೇಸಾಯಿ ಮತ್ತು ವಿಜಯ್ ಕುಲಕರ್ಣಿ ವಿರುದ್ಧ ಸುಳ್ಳು ಸಾಕ್ಷ್ಯದ ಪ್ರಕರಣವನ್ನು ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನಿರ್ದೇಶಿಸಲಾಗಿದೆ.
ಯೋಗೀಶ ಗೌಡರ್ ಮಕ್ಕಳಿಗೆ ಪರಿಹಾರ:
ಅಪರಾಧಿಗಳು ದಂಡ ಪಾವತಿಸಲು ವಿಫಲವಾಗಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಿದರೂ ಸಹ, ದಂಡ ಪಾವತಿಸುವ ಹೊಣೆಗಾರಿಕೆಯಿಂದ ಅವರು ಮುಕ್ತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಅಪರಾಧಿಗಳಿಗೆ ವಿಧಿಸಲಾಗಿರುವ ಎಲ್ಲ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಲಿವೆ. ಅಪರಾಧಿಗಳೆಲ್ಲರೂ ವಿಚಾರಣಾಧೀನ ಕೈದಿಯಾಗಿ ಅನುಭವಿಸಿದ ಬಂಧನದ ಅವಧಿಯು ಜೈಲು ಶಿಕ್ಷೆಯಿಂದ ಕಡಿತಗೊಳ್ಳಲಿದೆ ಎಂದು ಹೇಳಿದೆ. ಒಟ್ಟು ದಂಡದ ಮೊತ್ತದಿಂದ ಮೃತ ಯೋಗೀಶ ಗೌಡರ್ ಹಾಗೂ ಗುರುನಾಥ ಗೌಡರ್ ಅವರ ಮಕ್ಕಳು 16 ಲಕ್ಷ ರೂ. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಹಾಗೂ ಉಳಿದ ದಂಡದ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.
Related Articles
Thank you for your comment. It is awaiting moderation.



Comments (0)