ಬೆಂ. ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಸೋಲೂರು ಹೋಬಳಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ರಾಮನಗರ ಜಿಲ್ಲೆಯ (ಬೆಂಗಳೂರು ದಕ್ಷಿಣ) ಗಡಿ ಭಾಗದಲ್ಲಿರುವ ಸೋಲೂರು ಹೋಬಳಿಯನ್ನು ಬೆಂಗಳೂರು ‌ಗ್ರಾಮಾಂತರ‌ ಜಿಲ್ಲೆ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ‌ಜಾರಿಗೊಳಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿರುವ ಮಾಗಡಿ ತಾಲೂಕಿನ ಸೋಲೂರು ಹೊಬಳಿಯನ್ನು ರಾಮನಗರ ಜಿಲ್ಲೆಯಲ್ಲೇ (ಬೆಂಗಳೂರು ದಕ್ಷಿಣ) ಉಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಮಾಗಡಿ ತಾಲೂಕಿನ ಹೈಗಾನಹಳ್ಳಿಯ 82 ವರ್ಷದ ರೈತ ಹೊನ್ನಸಿದ್ದಯ್ಯ ಸೇರಿ ಸುತ್ತಮುತ್ತಲ ಹಳ್ಳಿಗಳ ರೈತರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಕುರಿತು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಾದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸೋಲೂರು ಹೊಬಳಿಯ ಜನತೆ ದಶಕಗಳ ಕಾಲದಿಂದ ಮಾಗಡಿ ನಗರವನ್ನು ಅವಲಂಬಿಸಿದ್ದಾರೆ. ಕಂದಾಯ ಕಚೇರಿಗಳು, ನ್ಯಾಯಾಲಯಗಳು, ಆಸ್ಪತ್ರೆಗಳು ಹಾಗೂ ಇತರ ಸರ್ಕಾರಿ ಸೌಕರ್ಯಗಳಿಗಾಗಿ ಮಾಗಡಿಗೆ ಬರುತ್ತಿದ್ದಾರೆ. ಹೋಬಳಿಯ ವಿವಿಧ ಗ್ರಾಮಗಳಿಗೆ ಮಾಗಡಿ ನಗರವು 2 ರಿಂದ 18 ಕಿಲೋಮೀಟರ್ ವ್ಯಾಪ್ತಿಯಲ್ಲಿದೆ. ಆದರೆ, ಸರ್ಕಾರದ ನಿರ್ಧಾರದಿಂದ ಈ ಹೋಬಳಿಯ ಜನ ಜಿಲ್ಲಾ ಮಟ್ಟದ ಕಚೇರಿಗಳಿಗೆ ಹೋಗಬೇಕಾದರೆ 68 ಕಿ.ಮೀ. ದೂರದ ದೇವನಹಳ್ಳಿಗೆ ಹೋಗಬೇಕಾಗುತ್ತದೆ. ಈ ಭಾಗಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲವಾಗಿದ್ದು, ಸುಮಾರು 5 ರಿಂದ 6 ತಾಸುಗಳ ಕಾಲ ಪ್ರಯಾಣ ಮಾಡಬೇಕು. ಇದರಿಂದ, ಈ ಭಾಗದ ರೈತರು, ಕಾರ್ಮಿಕರು, ಹಿರಿಯ ನಾಗರಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ತೀವ್ರ ತೊಂದರೆಯಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, ಭೌಗೋಳಿಕ ಸಮೀಪ ಮತ್ತು ಸಾರ್ವಜನಿಕ ಸೌಲಭ್ಯಗಳು ಮಾಗಡಿ ತಾಲೂಕಿನಲ್ಲಿ ಲಭ್ಯವಿದ್ದರೂ, ಹೋಬಳಿಯನ್ನು ನೆಲಮಂಗಲ ತಾಲೂಕಿನ ವ್ಯಾಪ್ತಿಗೆ ತಂದಿರುವ ಸರ್ಕಾರದ ನಿರ್ಧಾರ ಏಕಪಕ್ಷೀಯ ಮತ್ತು ಸಹಜ ನ್ಯಾಯ ಸಿದ್ದಾಂತಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡುವ ಸಂಬಂಧ 2025ರ ಸೆಪ್ಟಂಬರ್ 9 ರಂದು ಸರ್ಕಾರ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ಹಾಗೂ ಅಕ್ಟೋಬರ್ 27ರಂದು ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು. ಸೋಲೂರು ಹೊಬಳಿಯನ್ನು ಮಾಗಡಿ ತಾಲೂಕಿನಲ್ಲಿಯೇ ಉಳಿಸಬೇಕು. ನೆಲಮಂಗಲಕ್ಕೆ ಸೇರ್ಪಡೆ ಮಾಡಿರುವ ಸರ್ಕಾರದ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಕೋರಿದರು.

ಪ್ರಕರಣವೇನು?
ಸೋಲೂರು ಹೊಬಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಕಟಿಸಿತ್ತು. ಈ ಸಂಬಂಧ 2025ರ ಸೆಪ್ಟೆಂಬರ್ 9ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಅಕ್ಟೋಬರ್ 27ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment