ಪದೇಪದೆ ಗಂಭೀರ ಅಪರಾಧ ಚಟುವಟಿಕೆಯಲ್ಲಿ ಭಾಗಿ; ಹೂ ಮಂಜನ ಬಂಧನ ಎತ್ತಿಹಿಡಿದ ಹೈಕೋರ್ಟ್
- by LegalSamachar
- April 14, 2026
- 10 Views
ಬೆಂಗಳೂರು: ನಿರಂತರವಾಗಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ರೌಡಿ ಮಂಜುನಾಥ ಅಲಿಯಾಸ್ ಹೂ ಮಂಜನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಪುರಸ್ಕರಿಸಿದೆ.
ಹೂ ಮಂಜನ ಬಂಧನಕ್ಕೆ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಆತನ ತಾಯಿ ವರಲಕ್ಷ್ಮಮ್ಮ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶ:
ಬಂಧನದ ಕಾರಣಗಳನ್ನು ಸರ್ಕಾರ ಬಂಧಿತನಿಗೆ ತಿಳಿಸಿದೆ. ಅದರ ಸ್ವೀಕೃತಿ ಪ್ರತಿ, ಬಂಧನ ಆದೇಶ ಹಾಗೂ ಪೂರಕ ದಾಖಲೆಗಳಿಗೆ ಬಂಧಿತನೇ ಸ್ವತಃ ಸಹಿ ಹಾಕಿದ್ದಾನೆ. ಬಂಧನ ಆದೇಶವನ್ನು ಸ್ವೀಕರಿಸುವಾಗ ಪೋಟೋಗಳು ಸಹ ತೆಗೆದುಕೊಳ್ಳಲಾಗಿದೆ. ದಾಖಲಾದ ಎಲ್ಲ ಅಪರಾಧ ಪ್ರಕರಣಗಳಲ್ಲಿಯೂ ಬಂಧಿತನು ಜಾಮೀನು ಪಡೆದಿದ್ದಾನೆ ಎಂಬುದು ಬಂಧನ ಆದೇಶ ರದ್ದುಪಡಿಸಲು ಆಧಾರವಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಬಂಧಿತನ ವಿರುದ್ಧ ಕೊಲೆ, ಕೊಲೆಯತ್ನ, ಹಲ್ಲೆ, ಡಕಾಯಿತಿ, ಗಲಭೆ, ಜೀವ ಬೆದರಿಕೆ ಹಾಗೂ ಮನೆಬಾಗಿಲು ಮುರಿದು ಕಳವು ಮಾಡಿದ ಅಪರಾಧ ಕೃತ್ಯಗಳ ಸಂಬಂಧ ಯಲಹಂಕ ನ್ಯೂಟೌನ್ ಹಾಗೂ ಚಿಕ್ಕಜಾಲ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಹೂ ಮಂಜು ತಲೆಮರೆಸಿಕೊಳ್ಳುತ್ತಾನೆ, ಮತ್ತಷ್ಟು ಅಪರಾಧ ಕೃತ್ಯ ಎಸಗುತ್ತಾನೆ, ಜಾಮೀನು ಷರತ್ತು ಉಲ್ಲಂಘಿಸುತ್ತಾನೆ. ಬಂಧಿತನ ಸಹಚರರು ಮತ್ತು ವಿರೋಧಿ ಗುಂಪಿನ ನಡುವೆ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯಿದೆ. ಶಾಂತಿ ಸುವ್ಯವಸ್ಥೆ ಕಾಪಾಡಬೇಕಿರುವುದರಿಂದ ಹೂ ಮಂಜನ ಬಂಧನ ಅಗತ್ಯವಿದೆ ಎಂದು ಸರ್ಕಾರದ ಬಂಧನ ಆದೇಶದಲ್ಲಿ ವಿವರವಾಗಿ ಹೇಳಲಾಗಿದೆ. ಆದ್ದರಿಂದ, ಸರ್ಕಾರ ಆದೇಶ ಪುರಸ್ಕರಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣವೇನು?
ಹೂ ಮಂಜನನ್ನು ಗೂಂಡಾ ಕಾಯ್ದೆಯಡಿ ಬಂಧನ ಮಾಡಲು 2025ರ ಜುಲೈ 7ರಂದು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಆ ಆದೇಶವನ್ನು ರಾಜ್ಯ ಗೃಹ (ಕಾನೂನು ಮತ್ತು ಸುವ್ಯವಸ್ಥೆ) ಇಲಾಖೆ ಕಾರ್ಯದರ್ಶಿಗಳು ಜುಲೈ 14ರಂದು ಅನುಮೋದಿಸಿದ್ದರು. ಈ ಬಂಧನ ಆದೇಶ ರದ್ದುಪಡಿಸುವಂತೆ ಕೋರಿ ಹೂ ಮಂಜನ ತಾಯಿ ವರಲಕ್ಷ್ಮಮ್ಮ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಮಂಜುನಾಥನನ್ನು ಬಂಧಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕಾರಣ ತಿಳಿಸಿಲ್ಲ. 2024ರ ಡಿಸೆಂಬರ್‌ನಲ್ಲಿ ಕೊನೆಯದಾಗಿ ಮಂಜು ಅಪರಾಧ ಕೃತ್ಯ ಎಸಗಿದ್ದ. ಆದರೆ, ಏಳು ತಿಂಗಳ ನಂತರ ಅಂದರೆ 2025ರ ಜುಲೈನಲ್ಲಿ ಮಂಜುನನ್ನು ಬಂಧಿಸಲಾಗಿದೆ. ಬಂಧನ ಆದೇಶದಲ್ಲಿ ಹೊಸ ಆರೋಪಗಳಿಲ್ಲ. ದಾಖಲಾಗಿದ್ದ ಎಲ್ಲ ಅಪರಾಧ ಕೃತ್ಯಗಳ ಸಂಬಂಧ ಮಂಜು ಜಾಮೀನು ಪಡೆದಿದ್ದಾನೆ. ಆ ಜಾಮೀನು ಆದೇಶವನ್ನು ದುರ್ಬಳಕೆ ಮಾಡಿರುವುದನ್ನು ಸಾಬೀತುಪಡಿಸಲು ಪೊಲೀಸರು ಮತ್ತು ಸರ್ಕಾರ ವಿಫಲವಾಗಿದೆ. ಪೊಲೀಸರು ಯಾವುದೇ ಪ್ರಕರಣದಲ್ಲೂ ಜಾಮೀನು ರದ್ದತಿಗೆ ಕೋರಿಲ್ಲ. ಆದ್ದರಿಂದ, ಸರ್ಕಾರ ಹೊರಡಿಸಿರುವ ಬಂಧನ ಆದೇಶ ರದ್ದುಪಡಿಸಬೇಕು ಎಂದು ವರಲಕ್ಷ್ಮಮ್ಮ ಕೋರಿದ್ದರು. ಹೂ ಮಂಜ ಸದ್ಯ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
Related Articles
Thank you for your comment. It is awaiting moderation.



Comments (0)