ಸರ್ಕಾರಿ ಭೂಮಿ ಒತ್ತುವರಿ ಆರೋಪ; ಪರಕಾಲ ಸ್ವಾಮಿ ಮಠದ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

ಬೆಂಗಳೂರು: ಮಂಡ್ಯ ಜಿಲ್ಲೆಯ ಕಲ್ಲಹಳ್ಳಿಯ ಐತಿಹಾಸಿಕ ಭೂ ವರಾಹಸ್ವಾಮಿ ದೇವಾಲಯದ ನಿರ್ವಹಣೆಯ ಹೊಣೆ ಹೊತ್ತಿರುವ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ವಿರುದ್ಧ ಸರ್ಕಾರಿ ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಸದ್ಯ ಆ ಮಠದ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್ ಮೌಖಿಕವಾಗಿ ಆದೇಶಿಸಿದೆ.

ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ಆಡಳಿತಾಧಿಕಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ದೇವಾಲಯದ ದೈನಂದಿನ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗಲು ಮಠಕ್ಕೆ ಅಧಿಕಾರಿಗಳು ಯಾವುದೇ ರೀತಿಯ ನಿರ್ಬಂಧ ವಿಧಿಸಬಾರದು ಎಂದು ಆದೇಶಿಸಿತು.

ಜತೆಗೆ ಅರ್ಜಿ ಸಂಬಂಧ‌ ರಾಜ್ಯ ಸರ್ಕಾರ, ಕಂದಾಯ ಇಲಾಖೆ, ಪ್ರಾದೇಶಿಕ ಆಯುಕ್ತರು, ಮಂಡ್ಯ ಜಿಲ್ಲಾಧಿಕಾರಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಆಕ್ಷೇಪಣೆಗಳಲ್ಲಿದ್ದರೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಹೈಕೋರ್ಟ್ ಆದೇಶದಲ್ಲೇನಿದೆ?
ಅರ್ಜಿದಾರ ಮಠದಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸ್ಥಳೀಯ ತಹಸೀಲ್ದಾರ್‌ ಆ ಬಗ್ಗೆ ತನಿಖೆ ನಡೆಸಿದ್ದಾರೆ ಮತ್ತು ದೂರಿನಲ್ಲಿ ಹೇಳಿದ್ದಂತೆ ಯಾವುದೇ ರೀತಿಯ ಒತ್ತುವರಿ ಆಗಿಲ್ಲವೆಂದು ವರದಿ ನೀಡಿದ್ದಾರೆ. ಆದರೂ, ಹಿಂದಿನ ದೂರುದಾರರು ಎರಡನೇ ಬಾರಿ ಒತ್ತುವರಿ ಬಗ್ಗೆ ಮತ್ತೊಂದು ಸಮಿತಿ ರಚನೆ ಮಾಡುವಂತೆ ಆಗ್ರಹಿಸಿದ್ದರು. ಹಿಂದೆ ಹೈಕೋರ್ಟ್‌ ಆ ರೀತಿ ಸಮಿತಿ ರಚನೆಯನ್ನು ರದ್ದುಗೊಳಿಸಿತ್ತು. ನ್ಯಾಯಾಲಯ ಅರ್ಜಿದಾರರ ಪರ ಆದೇಶ ನೀಡಿದ್ದರೂ ಸಹ ಮತ್ತೊಮ್ಮೆ ದೂರುದಾರರು ಅದೇ ಅಂಶಗಳನ್ನು ಮುಂದಿಟ್ಟುಕೊಂಡು ದೂರು ನೀಡಿದ್ದಾರೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಆದೇಶದಲ್ಲಿ ದಾಖಲಿಸಿದೆ.

ಎಲ್ಲ ವಾದ ಆಲಿಸಿದ ಬಳಿಕ ಅರ್ಜಿದಾರರ ವಾದದಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎನಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದಿನ ಆದೇಶದವರೆಗೆ ಹೊಸದಾಗಿ ಹೊರಡಿಸಿರುವ ತನಿಖಾ ನೋಟಿಸ್‌ಗೆ ತಡೆ ನೀಡಲಾಗುವುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, 2025ರಲ್ಲಿ ಹೈಕೋರ್ಟ್‌ ಮಠದ ಪರವಾಗಿ ಅದೇಶ ನೀಡಿದ್ದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳು ಅನಗತ್ಯವಾಗಿ ಮತ್ತೆ ಮಠದ ವಿರುದ್ಧ ಒತ್ತುವರಿ ತೆರವು ಪ್ರಕ್ರಿಯೆ ಆರಂಭಿಸಿದ್ದಾರೆ. ಆದ್ದರಿಂದ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಆರಂಭಿಸಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ನ್ಯಾಯಪೀಠವನ್ನು ಕೋರಿದರು.

ಪರಕಾಲ ಮಠ 1817ರಿಂದಲೂ ಭೂ ವರಾಹಸ್ವಾಮಿ ದೇವಾಲಯದ ನಿರ್ವಹಣೆ ಹೊಣೆಯನ್ನು ಹೊತ್ತಿದ್ದು, ಮೈಸೂರಿನ ರಾಜಮನೆತನವೇ ದೇವಾಲಯದ ಆಡಳಿತವನ್ನು ಮಠದ ಸುರ್ಪದಿಗೆ ವಹಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Related Articles

Comments (0)

Leave a Comment