ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ವಾರ್ಡ್ ಸಮಿತಿ ರಚನೆಗೆ ಕೋರಿ ಪಿಐಎಲ್; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ಥಳೀಯ ವಾರ್ಡ್ ಸಮಿತಿಗಳು ಹಾಗೂ ಏರಿಯಾ ಸಭಾಗಳನ್ನು ರಚಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್‌ನ ಸಂಚಾಲಕ ಲಿಂಗರಾಜ ಧಾರವಾಡ ಶೆಟ್ಟರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ಸಂವಿಧಾನದ 73ನೇ ತಿದ್ದುಪಡಿಯಂತೆ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಾಲಿಕೆಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವುದು ಕಡ್ಡಾಯವಾಗಿದೆ. ಅಲ್ಲದೇ ಕರ್ನಾಟಕ ಪೌರನಿಗಮಗಳ ಕಾಯ್ದೆ-1976ಕ್ಕೆ ರಾಜ್ಯ ಸರ್ಕಾರ 2011ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ವಾರ್ಡ್ ಸಮಿತಿಗಳ ರಚನೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ 2022ರಲ್ಲಿ ಪಾಲಿಕೆಯ ಮೇಯರ್, ವಿಶೇಷ ಸದನ ಸಮಿತಿಗೆ ಮನವಿ ಸಲ್ಲಿಸಲಾಗಿದೆ. 2023ರಲ್ಲಿ ಮುಖ್ಯಮಂತ್ರಿ, 2024ರಲ್ಲಿ ನಗರಾಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರಿಗೂ ಹಲವು ಬಾರಿ ಮನವಿಯನ್ನು ಮಾಡಲಾಗಿದೆ. 2025ರಲ್ಲಿ ಅರ್ಜಿದಾರ ಸಂಸ್ಥೆಯು ಪಾಲಿಕೆಗೆ ಲೀಗಲ್ ನೋಟಿಸ್ ಸಹ ಕೊಟ್ಟಿದೆ. ಹೀಗಿದ್ದರೂ, ಈವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

Related Articles

Comments (0)

Leave a Comment