ಅರಣ್ಯ ಭೂಕಬಳಿಕೆಯ ಎಫ್‌ಐಆರ್ ರದ್ದುಪಡಿಸದಷ್ಟೂ ಒತ್ತುವರಿ ಮುಂದುವರಿಯುತ್ತಲೇ ಇರುತ್ತದೆ – ಹೈಕೋರ್ಟ್
- by LegalSamachar
- September 15, 2026
- 11 Views
ಬೆಂಗಳೂರು: ಅರಣ್ಯ ಪ್ರದೇಶ ಒತ್ತುವರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸುತ್ತಾ ಹೋದರೆ ಜನರೂ ಸಹ ಅರಣ್ಯ ಪ್ರದೇಶ ಒತ್ತುವರಿ ಮಾಡುತ್ತಲೇ ಹೋಗುತ್ತಾರೆ ಎಂದು ತೀಕ್ಷ್ಣವಾಗಿ ನುಡಿದಿರುವ ಹೈಕೋರ್ಟ್, ಅರಣ್ಯ ಒತ್ತುವರಿ ಮಾಡಿದ ಆರೋಪದಲ್ಲಿ ರೈತರೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಕನಕಪುರದಲ್ಲಿ 4 ಎಕರೆ ಅರಣ್ಯ ಜಮೀನು ಒತ್ತುವರಿ ಮಾಡಿದ ಆರೋಪದಲ್ಲಿ ಅರಣ್ಯಾಧಿಕಾರಿಗಳು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರೈತರೊಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಮೇಲಿನಂತೆ ಮೌಖಿಕವಾಗಿ ನುಡಿಯಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿನ ಅರ್ಜಿದಾರರ ವಿರುದ್ಧದ ಎಫ್‌ಐಆರ್ ಅಸಂಜ್ಞೇಯ (ನಾನ್ ಕಾಗ್ನೈಜಬಲ್) ಅಪರಾಧ ಅಂಶಗಳಿಂದ ಕೂಡಿದೆ. ಆದ್ದರಿಂದ, ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದರು.
ಈ ಮನವಿ ತಿರಸ್ಕರಿಸಿದ ನ್ಯಾಯಪೀಠ, ಕರ್ನಾಟಕದಲ್ಲಿ ಪ್ರತಿ ವರ್ಷ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದೆ. ಅದಕ್ಕೆ ಕಾರಣ ಏನು ಗೊತ್ತಾ? ಒತ್ತುವರಿ. ಅರಣ್ಯ ಪ್ರದೇಶ ಕಡಿಮೆಯಾದರೆ ಅದರ ಪರಿಣಾಮ ಪರಿಸರದ ಮೇಲೆ ಬೀಳುತ್ತದೆ. ಅರಣ್ಯ ಜಾಗದ ಒತ್ತುವರಿಗೆ ಸಂಬಂಧಿಸಿದ ಎಫ್‌ಐಆರ್ ರದ್ದುಪಡಿಸುತ್ತಾ ಹೋದರೆ ಜನ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡುತ್ತಾ ಹೋಗುತ್ತಾರೆ ಎಂದು ತೀಕ್ಷ್ಣವಾಗಿ ನುಡಿಯಿತು.
ಮುಂದುವರಿದು, ಪ್ರಕರಣದಲ್ಲಿ ಅರ್ಜಿದಾರರು 4 ಎಕರೆ ಅರಣ್ಯ ಜಮೀನು ಒತ್ತುವರಿ ಮಾಡಿದ ಆರೋಪವಿದೆ. ರಾಜ್ಯದೆಲ್ಲಡೆ ಅರಣ್ಯ ಪ್ರದೇಶ ಒತ್ತುವರಿಯಾಗುತ್ತಲೇ ಇದೆ. ತುಮಕೂರಿನ ದೇವರಾಯನ ದುರ್ಗದ ಮೀಸಲು ಅರಣ್ಯ ಪ್ರದೇಶ ಸಹ ಒತ್ತುವರಿಯಾಗಿದೆ. ಇಂತಹ ಪ್ರಕರಣಗಳಲ್ಲಿ ಎಫ್‌ಐಆರ್ ರದ್ದುಪಡಿಸಲಾಗದು. ಒತ್ತುವರಿದಾರರ ವಿರುದ್ಧ ಅರಣ್ಯಾಧಿಕಾರಿಗಳು ಸಹ ಸೂಕ್ತ ಕ್ರಮ ಜರುಗಿಸುವ ಮೂಲಕ ಅರಣ್ಯವನ್ನು ಸಂರಕ್ಷಿಸಬೇಕು ಎಂದು ಮೌಖಿಕವಾಗಿ ನುಡಿದ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.
ಪ್ರಕರಣವೇನು?
ಅರ್ಜಿದಾರರ ವಿರುದ್ಧ ಕನಕಪುರ ಅರಣ್ಯ ವಲಯ ಅಧಿಕಾರಿಯು ಕರ್ನಾಟಕ ಅರಣ್ಯ ಕಾಯ್ದೆ1963ರ ಸೆಕ್ಷನ್ 2(ಜಿ) ಮತ್ತು 24(ಜಿಜಿ) ಅಡಿಯಲ್ಲಿ ಅರಣ್ಯ ಜಾಗ ಒತ್ತುವರಿ ಆರೋಪದ ಮೇಲೆ 2022ರಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣವು ಕನಕಪುರ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು. ಇದರಿಂದ, ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ತಾವು ಅರಣ್ಯ ಭೂಮಿ ಒತ್ತವರಿ ಮಾಡಲ್ಲ. ವಿವಾದಿತ ಜಾಗದಲ್ಲಿ ಪೂರ್ವವಿಕರು ಬಹಳ ಹಿಂದಿನಿಂದಲೂ ಕೃಷಿ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದ, ವಿರುದ್ಧದ ಎಫ್‌ಐಆರ್ ರದ್ದುಪಡಿಸಬೇಕೆಂದು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.


Comments (0)