ಅರ್ಧ ವಿಚಾರಣೆಯಾದ ಪ್ರಕರಣವನ್ನು ಇಂಥ ನ್ಯಾಯಾಧೀಶರೇ ಮುಂದುವರಿಸಬೇಕೆಂದು ಆರೋಪಿ ಕೇಳಲಾಗದು – ಹೈಕೋರ್ಟ್

ಬೆಂಗಳೂರು: ಸಾಕ್ಷ್ಯ ವಿಚಾರಣೆ ಪೂರ್ಣಗೊಳ್ಳದ, ಆರೋಪಿಯ ಹೇಳಿಕೆ ದಾಖಲಿಸುವ ಹಂತ ತಲುಪದ ಹಾಗೂ ಅಂತಿಮ ವಾದ ಅಥವಾ ತೀರ್ಪಿಗಾಗಿ ಕಾಯ್ದಿರಿಸದ ಅರ್ಧಕ್ಕೆ ನಿಂತಿರುವ (ಪಾರ್ಟ್ ಹರ್ಡ್) ಕ್ರಿಮಿನಲ್‌ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬಹುದು. ಆದರೆ, ಪ್ರಕರಣವನ್ನು ಮೊದಲು ವಿಚಾರಣೆ ನಡೆಸಿದ್ದ ನ್ಯಾಯಾಧೀಶರೇ ಮುಂದುವರಿಸಬೇಕೆಂದು ಒತ್ತಾಯಿಸುವ ಹಕ್ಕು ಆರೋಪಿಗಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕೊಲೆ ಪ್ರಕರಣದ ವಿಚಾರಣೆಯನ್ನು ಬೇರೆ ನ್ಯಾಯಾಲಯದ ನ್ಯಾಯಾಧೀಶರಿಗೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಆರೋಪಿಯಾದ ಆರ್‌. ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಆರೋಪಿ ನ್ಯಾಯಸಮ್ಮತ ವಿಚಾರಣೆಗೆ ಹಾಗೂ ಸಮರ್ಥ ಮತ್ತು ನಿಷ್ಪಕ್ಷಪಾತ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಲು ಅರ್ಹನಾಗಿರುತ್ತಾನೆ. ಆದರೆ, ನಿರ್ದಿಷ್ಟ ನ್ಯಾಯಾಧೀಶರೇ ತನ್ನ ಪ್ರಕರಣದ ವಿಚಾರಣೆ ನಡೆಸಬೇಕೆಂದು ಒತ್ತಾಯಿಸುವ ಯಾವುದೇ ಸ್ಥಾಪಿತ ಹಕ್ಕು ಆತನಿಗಿರುವುದಿಲ್ಲ ಎಂದು ಹೇಳಿದೆ.

ಹೈಕೋರ್ಟ್ ಆದೇಶವೇನು?
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 365 ಮತ್ತು ಅದರ ಹಿಂದಿನ ಸಿಆರ್‌ಪಿಸಿ ಸೆಕ್ಷನ್‌ 326 ಅನ್ನು ಉಲ್ಲೇಖಿಸಿರುವ ನ್ಯಾಯಪೀಠ, ವಿಚಾರಣೆ ಆರಂಭಿಸಿದ ನ್ಯಾಯಾಧೀಶರೇ ಅದನ್ನು ಪೂರ್ಣಗೊಳಿಸಬೇಕೆಂಬ ಕಡ್ಡಾಯ ನಿಯಮವಿಲ್ಲ. ಒಬ್ಬ ನ್ಯಾಯಾಧೀಶರು ಸಂಪೂರ್ಣ ಅಥವಾ ಭಾಗಶಃ ಸಾಕ್ಷ್ಯ ದಾಖಲಿಸಿದ ನಂತರ ವರ್ಗಾವಣೆಗೊಂಡರೆ ಉತ್ತರಾಧಿಕಾರಿ ನ್ಯಾಯಾಧೀಶರು ಹಿಂದಿನ ಹಂತದಿಂದಲೇ ವಿಚಾರಣೆ ಮುಂದುವರಿಸಲು ಕಾನೂನು ಅವಕಾಶ ನೀಡುತ್ತದೆ. ನ್ಯಾಯಾಲಯ ಬದಲಾದ ಮಾತ್ರಕ್ಕೆ ಈಗಾಗಲೇ ಕಾನೂನುಬದ್ಧವಾಗಿ ನಡೆಸಿದ ಪ್ರಕ್ರಿಯೆ ರದ್ದಾಗುವುದಿಲ್ಲ ಅಥವಾ ವಿಚಾರಣೆ ಮೊದಲಿನಿಂದ ಆರಂಭಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಒಬ್ಬ ನ್ಯಾಯಾಧೀಶರು ದಾಖಲಿಸಿದ ಸಾಕ್ಷ್ಯವನ್ನು ಆಧರಿಸಿ ಮತ್ತೊಬ್ಬ ನ್ಯಾಯಾಧೀಶರು ಕಾನೂನುಬದ್ಧ ವರ್ಗಾವಣೆಯ ಬಳಿಕ ವಿಚಾರಣೆ ಮುಂದುವರಿಸಬಹುದು. ನ್ಯಾಯಾಲಯದ ನ್ಯಾಯಾಧೀಶರು ಬದಲಾದರೂ ವಿಚಾರಣೆಯ ನಿರಂತರತೆಯನ್ನು ಕಾನೂನು ಸಂರಕ್ಷಿಸುತ್ತದೆ ಎಂದಿರುವ ನ್ಯಾಯಪೀಠ, ವಿಚಾರಣೆ ನಡೆಸಿದ ನ್ಯಾಯಾಧೀಶರೇ ತೀರ್ಪು ನೀಡಬೇಕು ಎಂಬ ಅರ್ಜಿದಾರರ ಆರೋಪಿಯ ವಾದವನ್ನು ತಿರಸ್ಕರಿಸಿದೆ.

ಪ್ರಕರಣ ವರ್ಗಾವಣೆಯಾದಾಗ ತನಿಖಾಧಿಕಾರಿಯಾಗಿದ್ದ 20ನೇ ಸಾಕ್ಷಿದಾರರನ್ನು (ಪಿಡಬ್ಲೂ-20) ಹಾಜರುಪಡಿಸಿ, ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಬಾಕಿಯಿತ್ತು. ಸಾಕ್ಷ್ಯ ವಿಚಾರಣೆಯೇ ಪೂರ್ಣಗೊಂಡಿರಲಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 313ರಡಿ ಆರೋಪಿಯ ಹೇಳಿಕೆ ದಾಖಲಿಸುವ ಹಂತಕ್ಕೂ ಪ್ರಕರಣ ತಲುಪಿರಲಿಲ್ಲ. ಅಂತಿಮ ವಾದವೂ ಆರಂಭವಾಗಿರಲಿಲ್ಲ ಹಾಗೂ ತೀರ್ಪು ಅಥವಾ ಆದೇಶಕ್ಕಾಗಿ ಪ್ರಕರಣವನ್ನು ಕಾಯ್ದಿರಿಸಿರಲಿಲ್ಲ. ಜತೆಗೆ, ಆರೋಪಿಯ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಿರುವ, ಅಂತಿಮ ವಾದದ ಹಂತ ತಲುಪಿರುವ ಅಥವಾ ತೀರ್ಪಿಗಾಗಿ ಕಾಯ್ದಿರಿಸಿರುವ ಪ್ರಕರಣಗಳನ್ನು ಅದೇ ನ್ಯಾಯಾಲಯದಲ್ಲಿ ಮುಂದುವರಿಸಲು ಅಧಿಸೂಚನೆಯಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ಅರ್ಜಿದಾರನ ಪ್ರಕರಣ ಈ ಮೂರೂ ವಿನಾಯಿತಿಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಅರ್ಧ ವಿಚಾರಣೆಯಾಗಿರುವ (ಪಾರ್ಟ್ ಹರ್ಡ್) ಎಲ್ಲ ಪ್ರಕರಣಗಳನ್ನೂ ಅದೇ ನ್ಯಾಯಾಧೀಶರು ಮುಂದುವರಿಸಬೇಕು ಎಂಬ ನಾಲ್ಕನೇ ವಿನಾಯಿತಿಯನ್ನು ಸೃಷ್ಟಿಸುವಂತೆ ಅರ್ಜಿದಾರರು ಕೋರಿದ್ದಾರೆ. ಇಂತಹ, ವಿನಾಯಿತಿ ಅಧಿಸೂಚನೆಯಲ್ಲಾಗಲಿ, ಶಾಸನಾತ್ಮಕ ವ್ಯವಸ್ಥೆಯಲ್ಲಾಗಲಿ ಇಲ್ಲ. ಅಧಿಸೂಚನೆಯಲ್ಲಿ ಉದ್ದೇಶಪೂರ್ವಕವಾಗಿ ಸೇರಿಸದ ಅಂಶವನ್ನು ನ್ಯಾಯಾಲಯ ಹೊಸದಾಗಿ ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?
ಅರ್ಜಿದಾರ ಕೃಷ್ಣಮೂರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 302ರ ಅಡಿಯಲ್ಲಿ ಕೊಲೆ ಆರೋಪಕ್ಕೆ ಸಂಬಂಧಿಸಿದಂತಡ ವಿಚಾರಣೆ ನಡೆಯುತ್ತಿದೆ. ಬೆಂಗಳೂರು ನಗರದ ವಿಚಾರಣಾ ನ್ಯಾಯಾಲಯಗಳ ನಡುವೆ ಪೊಲೀಸ್‌ ಠಾಣೆಗಳು ಮತ್ತು ಉಪವಿಭಾಗಗಳನ್ನು ಮರುಹಂಚಿಕೆ ಮಾಡಿ ಪ್ರಧಾನ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರು 2026ರ ಮೇ 20ರಂದು ಅಧಿಸೂಚನೆ ಹೊರಡಿಸಿದ್ದರು. ಅದರ ಪರಿಣಾಮ ಅರ್ಜಿದಾರನ ವಿರುದ್ಧದ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Related Articles

Comments (0)

Leave a Comment