ಪೊಲೀಸ್ ವರ್ಗಾವಣೆಗೆ ಘಟನೋತ್ತರ ಅನುಮೋದನೆ ನೀಡಲು ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ಗೆ ಅಧಿಕಾರವಿದೆ – ಹೈಕೋರ್ಟ್
- by LegalSamachar
- September 12, 2026
- 8 Views
ಬೆಂಗಳೂರು: ಪೊಲೀಸ್ ಸಿಬ್ಬಂದಿ ಮಂಡಳಿಯ (ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್) ಪೂರ್ವಾನುಮತಿ ಇಲ್ಲದೆ ಹೊರಡಿಸಿದ ಪೊಲೀಸ್ ಅಧಿಕಾರಿಯ ವರ್ಗಾವಣೆ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲು ಮಂಡಳಿಗೆ ಅಧಿಕಾರವಿದ್ದು, ಅಂತಹ ಅನುಮೋದನೆಯಿಂದ ಪ್ರಕ್ರಿಯೆಯಲ್ಲಿನ ಲೋಪ ಸರಿಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ನ ಪೂರ್ವಾನುಮತಿ ಇಲ್ಲದೆ ಪೊಲೀಸ್ ಅಧಿಕಾರಿಗಳನ್ನು ಅವಧಿಪೂರ್ವ ವರ್ಗಾವಣೆ ಮಾಡಿ ಹೊರಡಿಸಲಾಗಿದ್ದ ಆದೇಶ ರದ್ದುಪಡಿಸಿದ್ದ ಕೆಎಟಿ ಆದೇಶವನ್ನು ಅನೂರ್ಜಿತಗೊಳಿಸಿರುವ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಕನಿಷ್ಠ ಸೇವಾವಧಿ ಪೂರ್ಣಗೊಳ್ಳುವ ಮುನ್ನವೇ ವರ್ಗಾವಣೆ ಮಾಡಲಾಗಿದೆ ಎಂಬ ಕಾರಣಕ್ಕೆ ಆದೇಶ ಕಾನೂನುಬಾಹಿರವಾಗುವುದಿಲ್ಲ. ಸಕ್ಷಮ ಪ್ರಾಧಿಕಾರ ಅನುಮೋದಿಸಿದ್ದರೆ ಅಂತಹ ವರ್ಗಾವಣೆ ಮಾನ್ಯವಾಗಿರುತ್ತದೆ ಎಂದು ಆದೇಶಿಸಿದೆ.
ಜತೆಗೆ, ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 20ಬಿ ಪ್ರಕಾರ ಡಿವೈಎಸ್ಪಿ ಮತ್ತು ಅದಕ್ಕಿಂತ ಕೆಳಗಿನ ಶ್ರೇಣಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಮತ್ತು ಬಡ್ತಿ ಸೇರಿ ಸೇವಾ ವಿಷಯಗಳನ್ನು ನಿರ್ಧರಿಸುವ ಅಧಿಕಾರ ಪೊಲೀಸ್ ಸಿಬ್ಬಂದಿ ಮಂಡಳಿಗಿದೆ. ಸೆಕ್ಷನ್ 20ಎಫ್ ಎಕ್ಸಿಕ್ಯೂಟಿವ್ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ಒಂದು ವರ್ಷದ ಸೇವಾವಧಿ ನಿಗದಿಪಡಿಸಿದರೂ, ನಿರ್ದಿಷ್ಟ ಸಂದರ್ಭಗಳಲ್ಲಿಅವಧಿಗೂ ಮುನ್ನ ವರ್ಗಾವಣೆಗೆ ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವೇನು?
ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಬಿ. ಗೋವಿಂದರಾಜು (ಅರ್ಜಿದಾರ) ಅವರನ್ನು 2026ರ ಮೇ 10ರ ಆದೇಶದಡಿ ವಿಧಾನಸೌಧ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಅದೇ ಆದೇಶದಲ್ಲಿ ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಾಗೂ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಹೆಚ್ಚುವರಿ ಹೊಣೆ ಹೊಂದಿದ್ದ ಸಿ. ಭಾಸ್ಕರ್ ಅವರನ್ನು ಬ್ಯಾಡರಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಆಗಿ ನಿಯೋಜಿಸಲಾಗಿತ್ತು. ಭಾಸ್ಕರ್ ಮೇ 11ರಂದು ಸಿಐಡಿಯಿಂದ ಬಿಡುಗಡೆಗೊಂಡು ಬ್ಯಾಡರಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ಆದರೆ, ಮೇ 14ರಂದು ಹೊರಡಿಸಿದ ಮತ್ತೊಂದು ಆದೇಶದಲ್ಲಿ ಭಾಸ್ಕರ್ ಅವರನ್ನು ಬ್ಯಾಡರಹಳ್ಳಿಯಿಂದ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಿ, ಅರ್ಜಿದಾರ ಗೋವಿಂದರಾಜು ಅವರನ್ನು ಬ್ಯಾಡರಹಳ್ಳಿ ಠಾಣೆಗೆ ನಿಯೋಜಿಸಲಾಗಿತ್ತು. ಅರ್ಜಿದಾರರು ಅದೇ ದಿನ ಪುಲಕೇಶಿನಗರ ಠಾಣೆಯಿಂದ ಬಿಡುಗಡೆಗೊಂಡು ರಾತ್ರಿ ಬ್ಯಾಡರಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಟಿ) ಅರ್ಜಿ ಸಲ್ಲಿಸಿದ್ದ ಭಾಸ್ಕರ್, ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 20ಬಿ ಮತ್ತು 20ಎಫ್ಗೆ ವಿರುದ್ಧವಾಗಿ ಅವಧಿಗೆ ಮುನ್ನವೇ ವರ್ಗಾವಣೆ ಮಾಡಲಾಗಿದೆ ಹಾಗೂ ವರ್ಗಾವಣೆಗೆ ಪೊಲೀಸ್ ಸಿಬ್ಬಂದಿ ಮಂಡಳಿ ಅನುಮೋದನೆ ನೀಡಿಲ್ಲ ಎಂದು ಆಕ್ಷೇಪಿಸಿದ್ದರು. ಭಾಸ್ಕರ್ ಅವರ ಅರ್ಜಿಯನ್ನು ಪುರಸ್ಕರಿಸಿದ್ದ ಕೆಎಟಿ ಮೇ 14ರ ವರ್ಗಾವಣೆ ಆದೇಶ ರದ್ದುಪಡಿಸಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಗೋವಿಂದರಾಜು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಶ್ನಾತೀತ ಹಕ್ಕು ದೊರೆಯದು:
ಪ್ರತಿವಾದಿ ಭಾಸ್ಕರ್ ಅವರು ಮೇ 11ರಂದು ಬ್ಯಾಡರಹಳ್ಳಿ ಠಾಣೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ ಮಾತ್ರಕ್ಕೆ ಒಂದು ವರ್ಷ ಅಲ್ಲಿಯೇ ಮುಂದುವರಿಯುವ ಪ್ರಶ್ನಾತೀತ ಹಕ್ಕು ಅವರಿಗೆ ದೊರೆಯುವುದಿಲ್ಲ. ಪೂರ್ವಾನುಮತಿ ಇಲ್ಲದಿರುವುದು ಸರಿಪಡಿಸಬಹುದಾದ ಲೋಪವಾಗಿದ್ದು, ವರ್ಗಾವಣೆ ಆದೇಶ ಅನೂರ್ಜಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮತ್ತು ನಿಯೋಜನೆ ನಿರ್ಧರಿಸುವ ಅಧಿಕಾರ ಪೊಲೀಸ್ ಸಿಬ್ಬಂದಿ ಮಂಡಳಿಗಿದೆ. ಆದ್ದರಿಂದ, ಹಾಲಿ ಪ್ರಕರಣದಲ್ಲಿ ವರ್ಗಾವಣೆಯ ನಂತರ ನೀಡಿರುವ ಅನುಮೋದನೆಯು ಅಧಿಕಾರ ವ್ಯಾಪ್ತಿ ಹೊಂದಿರದ ಸಂಸ್ಥೆಯಿಂದ ಬಂದ ಅನುಮೋದನೆ ಎನ್ನಲಾಗದು ಎಂದು ಅಭಿಪ್ರಾಯಪಟ್ಟು, ವರ್ಗಾವಣೆ ಆದೇಶ ರದ್ದುಗೊಳಿಸಿದ್ದ ಕೆಎಟಿ ಆದೇಶವನ್ನು ಅನೂರ್ಜಿತಗೊಳಿಸಿದೆ.
Related Articles
Thank you for your comment. It is awaiting moderation.


Comments (0)