ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಅಪರಾಧಿ ಮೊಹಮ್ಮದ್ ಶಾರೀಕ್‌ಗೆ 10 ವರ್ಷ ಕಠಿಣ ಶಿಕ್ಷೆ

ಬೆಂಗಳೂರು: ಮಂಗಳೂರಿನಲ್ಲಿ 2022ರಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಶಾರೀಕ್‌ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆಂಪರಾಜು ಅವರು ಸೋಮವಾರ ಪ್ರಕಟಿಸಿದ್ದು, ಅಪರಾಧಿ ಶಾರೀಕ್‌ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 94 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ವಿಚಾರಣೆ ವೇಳೆ ಎನ್‌ಐಎ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಮೊಹಮ್ಮದ್ ಶಾರೀಕ್ ಸ್ಫೋಟಕವನ್ನು ಆಟೋ ಮೂಲಕ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅದು ಸ್ಫೋಟಗೊಂಡಿತ್ತು. ಇದರಿಂದ, ಆಟೋ ಚಾಲಕ ಹಾಗೂ ಶಾರೀಕ್ ಇಬ್ಬರೂ ಗಾಯಗೊಂಡಿದ್ದರು. ಒಂದು ವೇಳೆ, ಅದನ್ನು ಉದ್ದೇಶಿತ ಸ್ಥಳದಲ್ಲಿ ಸ್ಫೋಟಿಸಲು ಶಾರೀಕ್ ಯಶಸ್ವಿಯಾಗಿದ್ದರೆ ಇನ್ನೂ ದೊಡ್ಡ ಮಟ್ಟದಲ್ಲಿ ಸಾವು-ನೋವುಗಳು ಸಂಭವಿಸುತ್ತಿದ್ದವು. ಆದ್ದರಿಂದ, ದೇಶದ ಭದ್ರತೆಗೆ ಧಕ್ಕೆ ತರುವ ಸಂಚು ರೂಪಿಸಿದ್ದ ಶಾರೀಕ್‌ಗೆ ಕಠಿಣ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಕರಣವೇನು?
ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರ ನವೆಂಬರ್ 19ರಂದು ಸಂಜೆ 4.40ರ ಸುಮಾರಿಗೆ ಶಾರೀಕ್ ಆಟೋದಲ್ಲಿ ತೆರಳುವಾಗ (ಐಇಡಿ) ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಸ್ಫೋಟ ಪ್ರಕರಣ ಸಂಬಂಧ 2024ರಲ್ಲಿ ಶಾರೀಕ್ ವಿರುದ್ಧ ಎನ್‌ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Related Articles

Comments (0)

Leave a Comment