ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸಲು ಸಚಿವ ಸಂಪುಟದ ಶಿಫಾರಸು ಇತ್ತೇ?; ಸರ್ಕಾರದಿಂದ ಮಾಹಿತಿ ಬಯಸಿದ ಹೈಕೋರ್ಟ್

ಬೆಂಗಳೂರು: ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಎಸಗಿದ ಆರೋಪದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಅಮಾನತುಗೊಳಿಸುವ ರಾಜ್ಯಪಾಲರ ನಿರ್ಧಾರವನ್ನು ಸಚಿವ ಸಂಪುಟದ ಶಿಫಾರಸು ಹಾಗೂ ಸಲಹೆಯೊಂದಿಗೆ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿರುವ ರಾಜ್ಯಪಾಲರ ಆದೇಶ ರದ್ದುಕೋರಿ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ಸೂಚನೆಯಂತೆ ಅರ್ಜಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಮುಖ್ಯ ಕಾರ್ಯದರ್ಶಿಗಳನ್ನು (ರಾಜ್ಯ ಸರ್ಕಾರ) 3ನೇ ಪ್ರತಿವಾದಿಯನ್ನಾಗಿ ಸೇರಿಸಲು ಅನುಮತಿ ಕೋರಿ ಶಿವಶಂಕರಪ್ಪ ಸಾಹುಕಾರ್ ಪರ ವಕೀಲರು ಮಧ್ಯಪ್ರವೇಶಿಸುವಿಕೆ ಅರ್ಜಿ (ಇಂಪ್ಲೀಡಿಂಗ್ ಪಿಟಿಷನ್) ಸಲ್ಲಿಸಿದರು.

ಇದನ್ನು ಅಂಗೀಕರಿಸಿದ ನ್ಯಾಯಪೀಠ, ಹೊಸದಾಗಿ ಸೇರ್ಪಡೆಗೊಂಡ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಪ್ರಕರಣದಲ್ಲಿ ರಾಜ್ಯ ಸರ್ಕಾರದ ಶಿಫಾರಸು ಮತ್ತು ಸಲಹೆ‌ ಇಲ್ಲದೆ ಅರ್ಜಿದಾರರನ್ನು ಅಮಾನತುಪಡಿಸಲಾಗಿದೆ ಎಂಬ ವಿಚಾರವನ್ನು ಅರ್ಜಿಯಲ್ಲಿ ಹೆಚ್ಚುವರಿ ಆಧಾರವಾಗಿ ಪ್ರಸ್ತಾಪಿಸಿರುವುದನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರನ್ನು ಅಮಾನತುಪಡಿಸಲು ಸರ್ಕಾರದ ಶಿಫಾರಸು ಹಾಗೂ ಸಲಹೆ ಇತ್ತೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಸರ್ಕಾರದ ಪರ ವಕೀಲರು ಈ ಕುರಿತು ಮಾಹಿತಿ ಪಡೆಯಲು ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಎತ್ತಿರುವ ಹೆಚ್ಚುವರಿ ವಿಚಾರಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು.

Related Articles

Comments (0)

Leave a Comment