ಪ್ರದೂಷ್ ರಾವ್ ಮಾಫಿ ಸಾಕ್ಷಿ; ಸೆಷನ್ಸ್ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್
- by LegalSamachar
- September 23, 2026
- 4 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೂಷ್ ರಾವ್ (14ನೇ ಆರೋಪಿ) ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದರೊಂದಿಗೆ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ಬಗ್ಗೆ ಆಕ್ಷೇಪಣೆ ಎತ್ತಿದ್ದ ನಟ ದರ್ಶನ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಪ್ರದೂಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ವಿಚಾರಣಾ ನ್ಯಾಯಾಲಯ ಸೆಪ್ಟೆಂಬರ್ 16ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಜಾಗೊಳಿಸಿದೆ.
ಪ್ರದೂಷ್ 2026ರ ಜುಲೈ 27ರಿಂದಲೂ ಬಿಡುಗಡೆಯಾದ ವಿಚಾರಣಾ ಕೈದಿಯೊಬ್ಬರ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದ ಮೊಬೈಲ್ ಸಂಖ್ಯೆಯನ್ನು ವಕೀಲ ಸಂತೋಷ್ ಎಂಬ ಹೆಸರು ನಮೂದಿಸಿಕೊಂಡು ತನ್ನ ಹೆಂಡತಿಯೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದರಲ್ಲದೆ, ಹೆಂಡತಿಯ ಮೂಲಕ ಇತರರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಪತ್ನಿಯೂ ಹೊರಗಿನವರೊಂದಿಗೆ ಮಾತನಾಡಿದ್ದಾರೆ. ಇದಾದ ನಂತರ ಆತನ ಮನಸ್ಥಿತಿ ಬದಲಾಗಿದೆ. ಬೇರೆಯವರ ಚಿತಾವಣೆ, ಪ್ರಭಾವಕ್ಕೆ ಒಳಗಾಗಿ ಹಾಗೂ ದುರುದ್ದೇಶದಿಂದ 2026ರ ಆಗಸ್ಟ್ 8ರಂದು ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ, ದೋಷಾರೋಪಟ್ಟಿ ಸಲ್ಲಿಕೆಯಾಗುವ ಮುನ್ನ ಮಾಫಿ ಸಾಕ್ಷಿಯಾಗಲು ಬಯಸಿಲ್ಲ. ಪ್ರದೂಷ್ ಮೊಬೈಲ್ ಸಂಖ್ಯೆ ದುರ್ಬಳಕೆ ಪ್ರಕರಣ ತನಿಖೆ ಪೂರ್ಣಗೊಳ್ಳುವರೆಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ತಡೆಹಿಡಿಯಬೇಕೆಂಬ ಮನವಿ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ದೋಷಪೂರಿತವಾಗಿದೆ ಎಂಬ ದರ್ಶನ್ ಪರ ವಕೀಲ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ನಿಯಮಗಳ ಪ್ರಕಾರ ಪ್ರಕರಣದ ಯಾವುದೇ ಹಂತದಲ್ಲಾದರೂ ಆರೋಪಿಯು ಮಾಫಿ ಸಾಕ್ಷಿಯಾಗಿ ಕೋರಲು ಅವಕಾಶವಿದೆ. ಅದನ್ನು ಪ್ರಶ್ನಿಸುವ/ವಿರೋಧಿಸುವ ಹಕ್ಕು ಸಹ ಆರೋಪಿಗೆ ಇಲ್ಲ. ಪ್ರದೂಷ್ ಜೈಲಿನಿಂದ ಪ್ರತ್ನಿಯೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದ. ಆ ಕುರಿತ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬ ಕಾರಣಕ್ಕೆ ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬಾರದು ಎಂದು ಹೇಳಲಾಗದು. ಪ್ರದೂಷ್ ಮಾಫಿ ಸಾಕ್ಷಿಯಾಗಲು ಕೋರಿದ ಮರು ದಿನವೇ ಅದಕ್ಕೆ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿರುವುದಲ್ಲಿ ತಪ್ಪು ಹುಡುಕಲಾಗದು. ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಮುನ್ನ ಪ್ರಾಸಿಕ್ಯೂಷನ್ ವಾದವನ್ನು ವಿಚಾರಣಾ ನ್ಯಾಯಾಲಯ ಆಲಿಸಿದೆ. ಈ ಎಲ್ಲ ಕಾರಣಗಳಿಂದ ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಜತೆಗೆ, ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಕಾನೂನಿನ ಅನ್ವಯ ದರ್ಶನ್ ಪರ ವಕೀಲರು ಪ್ರದೂಷ್ ರಾವ್ ಅವರನ್ನು ಪ್ರಶ್ನಿಸಬಹುದಾಗಿದೆ. ಆ ವೇಳೆ ದರ್ಶನ್ ತಮಗೆ ಕೇಳಬೇಕೆನಿಸಿದ ಎಲ್ಲ ಪ್ರಶ್ನೆಗಳನ್ನು ಕೇಳಲು ಮುಕ್ತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿತು.
ಯಾವುದೇ ಹಂತದಲ್ಲಿ ಮಾಫಿ ಸಾಕ್ಷಿಯಾಗಬಹುದು:
ತನಿಖೆ ಅಥವಾ ಟ್ರಯಲ್ (ವಿಚಾರಣೆ) ಯಾವುದೇ ಹಂತದಲ್ಲಾದರೂ, ಪ್ರಾಸಿಕ್ಯೂಷನ್ ಮೂಲಕ ಇಲ್ಲವೇ ಕೋರ್ಟ್‌ಗೆ ನೇರವಾಗಿ ಅರ್ಜಿ ಸಲ್ಲಿಸಿ ಆರೋಪಿ ಮಾಫಿ ಸಾಕ್ಷಿಯಾಗಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಮಾಫಿ ಸಾಕ್ಷಿಯಾಗಲು ಪ್ರದೂಷ್ ಕೈಗೊಂಡ ನಿರ್ಧಾರ, ಅದರ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನು ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಪ್ರಶ್ನಿಸುವ ಸಂಪೂರ್ಣ ಹಕ್ಕು ದರ್ಶನ್‌ಗೆ ಇದ್ದೇ ಇದೆ. ಪ್ರದೂಷ್ ಅವರ ಪಾಟಿ ಸವಾಲು ಪ್ರಕ್ರಿಯೆ ವೇಳೆ ವಿಚಾರಣೆಗೆ ಖುದ್ದು ಹಾಜರಾಗಲು ದರ್ಶನ್‌ಗೆ ನ್ಯಾಯಪೀಠ ಈಗಾಗಲೇ ಅನುಮತಿಯನ್ನೂ ನೀಡಿದೆ. ಇನ್ನು ಪ್ರದೂಷ್ ಅವರು ವಕೀಲ ಸಂತೋಷ್ ಎಂದು ಹೆಸರು ನಮೂದಿಸಿಕೊಂಡು ಪತ್ನಿಯೊಂದಿಗೆ ಮಾತನಾಡಿದ್ದಾನೆ ಅಷ್ಟೇ. ಪ್ರಕರಣದ ವರದಿಯಲ್ಲಿ ಏನೋ ಸೀಕ್ರೇಟ್ ಮಾತನಾಡಿದ್ದಾನೆ ಎಂದೇನಿಲ್ಲ ಎಂದು ವಿಚಾರಣೆ ವೇಳೆ ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ಇದೇ ವೇಳೆ, ಪ್ರದೂಷ್ ತನ್ನ ಪತ್ನಿಯೊಂದಿಗೆ ಮಾತನಾಡುವುದನ್ನು ಪ್ರಶ್ನಿಸಲಾಗಿದೆ. ಆದರೆ, ದರ್ಶನ್ ಬದಲಿಗೆ ಅವರ ಪತ್ನಿ ಈ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಮಂಡಿಸಿದ ವಾದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿ ಸಲ್ಲಿಸಲು ಯಾರಾದರೇನು? ಯಾರು ಬೇಕಾದರೂ ನ್ಯಾಯಾಲಯದ ಘಂಟೆ ಬಾರಿಸಬಹುದು. ಬೇರೆ ಯಾರೋ ಅರ್ಜಿ ಹಾಕಿಲ್ಲ. ದರ್ಶನ್ ಅವರ ಶ್ರೀಮತಿಯವರು ಹಾಕಿದ್ದಾರೆ. ಪತಿ ವಾಪಸ್ ಬರಲಿ ಎಂದು ಪತ್ನಿ ಒದ್ದಾಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಬೇಡಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಅವರ ಹಕ್ಕಿನ ಬಗ್ಗೆ ಪ್ರಶ್ನಿಸುವುದು ಬೇಡ. ಅವರವರ ಪತ್ನಿಯ ಜತೆಗೇ ಮಾತನಾಡುತ್ತಿದ್ದಾರೆ. ಅದಕ್ಕೆ ಪ್ರಾಸಿಕ್ಯೂಷನ್ ಖುಷಿಪಡಬೇಕು ಹೊರತು ಆಕ್ಷೇಪ ಏಕೆ ಮಾಡಬೇಕು ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.
Related Articles
Thank you for your comment. It is awaiting moderation.


Comments (0)