ಅತ್ಯಾಚಾರ, ಬಲವಂತದ ಮತಾಂತರ ಆರೋಪ ಪ್ರಕರಣ; ಆರೋಪಿಯ ತಾಯಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

ಬೆಂಗಳೂರು: ಅತ್ಯಾಚಾರ ಹಾಗೂ ಬಲವಂತದ ಮತಾಂತರ ಪ್ರಕರಣವೊಂದರಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಪ್ರಮುಖ ಆರೋಪಿಯ ತಾಯಿಗೆ ಹೈಕೋರ್ಟ್‌ ಶುಕ್ರವಾರ (ಮೇ 29) ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಗುರಪ್ಪನಪಾಳ್ಯದ ನಿವಾಸಿ ಜಬೀನ್ ತಾಜ್ (44) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ, ಅತ್ಯಾಚಾರ ಆರೋಪದಲ್ಲಿ ಅರ್ಜಿದಾರೆಯ ಭಾಗವಹಿಸುವಿಕೆ ಈ ಹಂತದಲ್ಲಿ ಕಾಣುತ್ತಿಲ್ಲ. ಆದ್ದರಿಂದ, ಆರೋಪಗಳು ಗಂಭೀರವಾಗಿವೆ ಎಂದು ಆಕೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರೆಯನ್ನು ಬಂಧಿಸಿದ ಸಂದರ್ಭದಲ್ಲಿ 2 ಲಕ್ಷ ರೂ. ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು. ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸುವವರೆಗೆ ಅರ್ಜಿದಾರೆ ಪ್ರತಿ ಶನಿವಾರ ಬೆಳಗ್ಗೆ 11 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಬಾರದು, ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ತಿರುಚಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ದೂರುದಾರೆ ಮತ್ತು ಮೊದಲನೇ ಆರೋಪಿಯು ಪ್ರೀತಿಸಿ ಮದುವೆಯಾಗಿದ್ದು, ಅದು ವಿಶೇಷ ವಿವಾಹ ಕಾಯ್ದೆ ಅಡಿ ನೋಂದಾಯಿಸಲ್ಪಟ್ಟಿದೆ. ಮೊದಲನೇ ಆರೋಪಿಯ ವಿರುದ್ಧದ ಆರೋಪಗಳು ಜೀವಾವಧಿ ಅಥವಾ ಗಲ್ಲು ಶಿಕ್ಷೆ ವಿಧಿಸುವಂಥದ್ದಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣವೇನು?
ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಗೆ 2026ರ ಮಾರ್ಚ್ 17ರಂದು ತೆರಳಿ ದೂರು ನೀಡಿದ್ದ ದೂರುದಾರೆ, 2025ರ ಫೆಬ್ರವರಿಯಲ್ಲಿ ಮೊದಲನೇ ಆರೋಪಿಯು ನನಗೆ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆನಂತರ, ತನ್ನ ಮೊಬೈಲ್‌ನಿಂದ ನನ್ನ ಬೆತ್ತಲೆ ಮತ್ತು ಆಕ್ಷೇಪರ್ಹವಾದ ಚಿತ್ರಗಳನ್ನು ತೆಗೆದಿದ್ದಾನೆ. ಇದನ್ನೇ ಇಟ್ಟುಕೊಂಡು ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿ, ಪದೇಪದೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದರಿಂದ ಗರ್ಭ ಧರಿಸಿದ್ದೆನು. ಈ ಸಂದರ್ಭದಲ್ಲಿ ದೈಹಿಕ ಹಲ್ಲೆ ನಡೆಸಿದ್ದರಿಂದ ನವಜಾತ ಶಿಶು ಮರಣ ಹೊಂದಿತ್ತು. ಈ ಮಧ್ಯೆ ಹಿಂದು ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ ಮಾತ್ರ ನನ್ನನ್ನು ಮದುವೆಯಾಗುವುದಾಗಿ ಆತ ಒತ್ತಾಯಿಸಿದ್ದ. ಇದರಿಂದ, 2025ರ ಜೂನ್‌ 22ರಂದು ಇಸ್ಲಾಂಗೆ ಮತಾಂತರಗೊಂಡು, ಜೈನಾಬ್‌ ಎಂದು ಬದಲಿಸಿಕೊಂಡು, ಆತನನ್ನು ಮದುವೆಯಾಗಿದ್ದೇನೆ ಎಂದು ವಿವರಿಸಿದ್ದರು.

ಮದುವೆಯ ಬಳಿಕ ಮೊದಲನೇ ಆರೋಪಿ ನನ್ನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿದ್ದು, ಅಂತಿಮವಾಗಿ 2026ರ ಜನವರಿ 23ರಂದು ಎರಡು ತಿಂಗಳ ಮಗುವಿನ ಜತೆಗೆ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಬಿಟ್ಟು ಹೋಗಿದ್ದ. ಆನಂತರ, ಪ್ರಯಾಸಪಟ್ಟು ಬೆಂಗಳೂರಿಗೆ ಬಂದಿದ್ದೆ. ಆರೋಪಿಯ ತಾಯಿ ಜಬೀನ್ ತಾಜ್ ಅವರ ಕೆಲ ಬೆಂಬಲಿಗರು ನನ್ನ ಬಳಿಗೆ ಬಂದು ನಾನು ಮದುವೆಯಾದ ಬಳಿಕ ಸಂತೋಷವಾಗಿದ್ದೇನೆ ಎಂದು ಒತ್ತಾಯಪೂರ್ವಕವಾಗಿ ಹೇಳಿಸಿ, ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ. ಮದುವೆಯ ವಿಚಾರ ಬಹಿರಂಗಗೊಳಿಸದಂತೆ ಬೆದರಿಕೆ ಹಾಕಿದ್ದು, ಮೊದಲನೇ ಆರೋಪಿ ಮತ್ತು ಆತನ ಸಹಚರರು ನನ್ನ ಮಗುವನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂಬಂಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 64 (ಅತ್ಯಾಚಾರ), 85 (ಕಿರುಕುಳ), 137(2) (ಅಕ್ರಮ ಚಟುವಟಿಕೆಗಾಗಿ ವಿವಾಹ) 118(1) ಮತ್ತು 118(2) (ಹಲ್ಲೆ), 351(2) (ಬೆದರಿಕೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಇ (ಖಾಸಗಿತನ ಉಲ್ಲಂಘನೆ), ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ ಸೆಕ್ಷನ್‌ 4, ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ರಕ್ಷಣೆಯ ಸುಗ್ರೀವಾಜ್ಞೆ ಸೆಕ್ಷನ್‌ 3 (ದುರುದ್ದೇಶದಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೊದಲನೇ ಆರೋಪಿಯ ತಾಯಿಯಾಗಿರುವ ಅರ್ಜಿದಾರೆ ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2026ರ ಮೇ 6ರಂದು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ, ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರೆಯ ಪರ ವಕೀಲರು, ಅರ್ಜಿದಾರೆ ಮೊದಲನೇ ಆರೋಪಿಯ ತಾಯಿಯಾಗಿದ್ದಾರೆ. ಆರೋಪಿತ ಅಪರಾಧದಲ್ಲಿ ಅವರ ಪಾತ್ರವಿಲ್ಲ. 2025ರ ಜೂನ್‌ 18ರಂದು ವಿಶೇಷ ವಿವಾಹ ಕಾಯ್ದೆ ಅಡಿ ದೂರುದಾರೆ ಮತ್ತು ಮೊದಲನೇ ಆರೋಪಿಯ ವಿವಾಹ ನೋಂದಾಯಿಸಲ್ಪಟ್ಟಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

Related Articles

Comments (0)

Leave a Comment