ವಿದ್ಯಾರ್ಥಿನಿಗೆ ಅಕ್ರಮ ಗರ್ಭಪಾತ; ವೈದ್ಯೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು: ಪ್ರೌಢಶಾಲೆಯ ವಿದ್ಯಾರ್ಥಿನಿಗೆ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ ಆರೋಪ ಎದುರಿಸುತ್ತಿರುವ 70 ವರ್ಷದ ವೈದ್ಯೆಯೊಬ್ಬರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಹೈಕೋರ್ಟ್, ‘ನೀವೆಂಥಾ ವೈದ್ಯೆ’ ಎಂದು ಆಕೆಯ ವಿರುದ್ಧ ಕಿಡಿಕಾರಿದೆ.

ನಿರೀಕ್ಷಣಾ ಜಾಮೀನು ಕೋರಿ ಚಿತ್ರದುರ್ಗದ ಶ್ರೀನಿವಾಸ ನರ್ಸಿಂಗ್‌ ಹೋಮ್‌ನ ವೈದ್ಯೆ ಡಾ. ಶಂಕರಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌. ನಟರಾಜ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಶುಕ್ರವಾರ (ಮೇ 29) ವಿಚಾರಣೆ ನಡೆಸಿತು.

ಅರ್ಜಿದಾರರ ನಡೆಯನ್ನು ತೀವ್ರವಾಗಿ ಖಂಡಿಸಿದ ನ್ಯಾಯಪೀಠ, ನೀವು ಘನತೆಯುತ ವೈದ್ಯರು ಎಂದು ಹೇಳಿಕೊಳ್ಳುತ್ತೀರಿ. ಸಂತ್ರಸ್ತ ಬಾಲಕಿಯು ನಿಮ್ಮ ಮುಂದೆ ಗರ್ಭಿಣಿಯಾಗಿ ಬಂದಿದ್ದಾಳೆ. ಆದರೆ, ನೀವು, ಆಕೆ ಋತುಚಕ್ರದಲ್ಲಿ ವ್ಯತ್ಯಾಸಕ್ಕಾಗಿ ಚಿಕಿತ್ಸೆ ಪಡೆಯಲು ಬಂದಿದ್ದಳು ಎನ್ನುತ್ತಿದ್ದೀರಿ. ಇದರ ತನಿಖೆಯಾಗಬೇಕಿದೆ. ಇಂಥ ಪ್ರಕರಣಗಳನ್ನು ಸುಲಭವಾಗಿವಾಗಿ ಪರಿಗಣಿಸಲಾಗದು. ನೀವೆಂಥಾ ವೈದ್ಯೆ ಎಂದು ಕಿಡಿಕಾರಿತು.

ವೈದ್ಯೆ ಪರ ಹಿರಿಯ ವಕೀಲ ಎಂ.ಎಸ್‌. ಶ್ಯಾಮ್‌ಸುಂದರ್‌ ವಾದ ಮಂಡಿಸಿ, ಗುಪ್ತಾಂಗದಲ್ಲಿ ರಕ್ತಸ್ರಾವ ಮತ್ತು ಮುಟ್ಟಿನಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಿ ಬಾಲಕಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಬರುವ ವೇಳೆಗೆ ಗರ್ಭಪಾತವಾಗಿತ್ತು. ವೈದ್ಯೆಯು ಚಿಕಿತ್ಸೆ ಮಾತ್ರ ನೀಡಿದ್ದಾರೆ. ಡಾ. ಶಂಕರಲಕ್ಷ್ಮಿ ಅವರು 70 ವರ್ಷಗಳಿಂದ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ಗರ್ಭಪಾತ ಮಾಡಿಸಿಲ್ಲ ಎಂದರು.

ಅದಕ್ಕೆ ನ್ಯಾಯಪೀಠ, ನಿಮಗೆ 70 ವರ್ಷವೋ ಅಥವಾ 700 ವರ್ಷವೋ ನಮಗೆ ಬೇಕಿಲ್ಲ. ನೀವು ನಡೆದುಕೊಂಡಿರುವ ರೀತಿ ಕಳವಳಕಾರಿಯಾಗಿದೆ. ಸಂತ್ರಸ್ತ ಬಾಲಕಿಯು ಗರ್ಭಧರಿಸಿ ನಿಮ್ಮ ಬಳಿ ಬಂದಿದ್ದರೂ ನೀವು ಋತುಚಕ್ರದಲ್ಲಿ ವ್ಯತ್ಯಾಸಕ್ಕೆ ಬಂದಿದ್ದರು ಎನ್ನುತ್ತಿದ್ದೀರಿ? ಎಂದು ಕುಟುಕಿತು.

ಆಗ ಶ್ಯಾಮ್‌ಸುಂದರ್‌ ಅವರು, ಅರ್ಜಿದಾರರು ತನಿಖೆಗೆ ಸಹಕರಿಸಲಿದ್ದಾರೆ ಮತ್ತು ಆಸ್ಪತ್ರೆಯಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಸಲ್ಲಿಸಲಾಗುವುದು. ಅಕ್ರಮವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪದ ಮೇಲೆ ಪೋಕ್ಸೊ ಕಾಯ್ದೆ ಅಡಿ ಕಸ್ಟಡಿಗೆ ಪಡೆದು ವೈದ್ಯೆಯನ್ನು ತನಿಖೆ ನಡೆಸುವ ಅಗತ್ಯವಿಲ್ಲ ಎಂದರು.

ಅಂತಿಮವಾಗಿ ನ್ಯಾಯಪೀಠ, ವೈದ್ಯೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿ, ವಿಚಾರಣೆಯನ್ನು ಬೇಸಿಗೆ ರಜೆಯ ನಂತರಕ್ಕೆ ಮುಂದೂಡಿತು.

ಪ್ರಕರಣವೇನು?
ಪ್ರೌಢಶಾಲೆಯ ವಿದ್ಯಾರ್ಥಿನಿಯನ್ನು ಶಿಕ್ಷಕ ರಾಜಣ್ಣ ಎಂಬಾತ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನೆಂಬ ಆರೋಪವಿದೆ. ಕಾಲ ಕಳೆದಂತೆ ವಿದ್ಯಾರ್ಥಿನಿಯ ದೈಹಿಕ ಬದಲಾವಣೆಯನ್ನು ಮಹಿಳಾ ಶಿಕ್ಷಕಿಯೊಬ್ಬರು ಪ್ರಶ್ನಿಸಿದ್ದು, ಆಕೆ ಘಟನೆಯ ಬಗ್ಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಮಹಿಳಾ ಶಿಕ್ಷಕಿ ಕಿಟ್‌ ನೆರವಿನಿಂದ ಆಕೆಯ ಮೂತ್ರ ಪರೀಕ್ಷೆ ಮಾಡಿದ್ದರು. ಇದರಲ್ಲಿ ವಿದ್ಯಾರ್ಥಿನಿ ಗರ್ಭ ಧರಿಸಿರುವುದು ತಿಳಿದುಬಂದಿತ್ತು. ವಿಚಾರವನ್ನು ಶಿಕ್ಷಕರು ಸೇರಿ ಸಂತ್ರಸ್ತೆಯ ಗಮನಕ್ಕೆ ತಂದಿದ್ದರು. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಲಾಗಿತ್ತು ಎಂದು ಆರೋಪಿಸಲಾಗಿದೆ.

Related Articles

Comments (0)

Leave a Comment