ವಿವಿಎಂವಿಪಿಟಿ ವಿರುದ್ಧದ ಭೂ ಒತ್ತುವರಿ ಆರೋಪ; ಎಸ್‌ಐಟಿ ರಚನೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
- by Jagan Ramesh
- August 3, 2026
- 6 Views
ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಫೌಂಡೇಷನ್‌ಗೆ ಸೇರಿದ ವೇದ ವಿಜ್ಞಾನ ಮಹಾ ವಿದ್ಯಾ ಪೀಠ ಟ್ರಸ್ಟ್ (ವಿವಿಎಂವಿಪಿಟಿ) ವಿರುದ್ಧದ ಸರ್ಕಾರಿ ಭೂಮಿ ಒತ್ತುವರಿ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆಗೆ ಸಂಬಂಧಿಸಿದ ಸರ್ಕಾರಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ವಿವಿಎಂವಿಪಿಟಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಜತೆಗೆ, ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ.
ಯಾವುದೇ ವ್ಯಕ್ತಿ ವಿರುದ್ಧ ಯಾವುದೇ ಆರೋಪ ಮಾಡುವುದಕ್ಕೂ ಮುನ್ನ ಇಲ್ಲಿ ಅರ್ಜಿದಾರರಾಗಿರುವ ಅವರನ್ನೂ ಒಳಗೊಂಡಂತೆ ಜಂಟಿ ಸಮೀಕ್ಷೆ ನಡೆಸಿ, ಆನಂತರ ಸಕ್ಷಮ ಪ್ರಾಧಿಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ವಿವಿಎಂವಿಪಿಟಿ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂದು ಹೇಳುವುದಕ್ಕೂ ಮುನ್ನ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿ ನಿಯಮ ಪಾಲಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಅದರ ಪಾಲನೆಯಾಗಿಲ್ಲ. ಸರ್ಕಾರದ ಆಕ್ಷೇಪಾರ್ಹ ಆದೇಶದಿಂದ ತಿಳಿಯುವುದೇನೆಂದರೆ, ಸಂಬಂಧಿತ ಪ್ರಾಧಿಕಾರ ನಿಯಮಗಳನ್ನು ಪಾಲಿಸಿಲ್ಲ. ಆದ್ದರಿಂದ, 2026ರ ಜುಲೈ 17ರ ಆದೇಶಕ್ಕೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಜುಲೈ 31ರ ಆದೇಶಲ್ಲಿ ನ್ಯಾಯಪೀಠ ಹೇಳಿದೆ.
ಪ್ರಕರಣವೇನು?
ವಿವಿಎಂವಿಪಿಟಿಯನ್ನು 1981ರಲ್ಲಿ ಶ್ರೀ ಶ್ರೀ ರವಿಶಂಕರ್ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಅಡಿ ಸ್ಥಾಪಿಸಲಾಗಿದ್ದು, ಆರ್ಟ್ ಆಫ್ ಲಿವಿಂಗ್ ಮತ್ತದರ ಸಂಬಂಧಿತ ಸಂಸ್ಥೆಗಳು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪಗಳ ಸಂಬಂಧಿತ ತನಿಖೆಗೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು.
2025ರ ಅಕ್ಟೋಬರ್‌ನಲ್ಲಿ ಭೂ ದಾಖಲೆ ಸಹಾಯಕ ನಿರ್ದೇಶಕರ ಸಮೀಕ್ಷೆಯ ಪ್ರಕಾರ 290 ಎಕರೆ ಗೋಮಾಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ವಾದಿಸಿದೆ. ಟ್ರಸ್ಟ್ ಭೂಮಿ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸುವುದಕ್ಕೂ ಮುನ್ನ ನಿಯಮಗಳನ್ನು ಪಾಲಿಸಿಲ್ಲ ಎಂದು ಆಕ್ಷೇಪಿಸಿ ವಿವಿಎಂಪಿವಿಟಿ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Thank you for your comment. It is awaiting moderation.


Comments (0)