ಬಿಡದಿ ಟೌನ್‌ಶಿಪ್- ಪರಿಹಾರ ನಿರ್ಧಾರವಾಗುವವರೆಗೆ ಅರ್ಜಿದಾರ ಭೂಮಾಲೀಕರಿಗೆ ತೊಂದರೆಯಿಲ್ಲ; ಹೈಕೋರ್ಟ್‌ಗೆ ಸರ್ಕಾರದ ವಾಗ್ದಾನ
- by LegalSamachar
- August 4, 2026
- 6 Views
ಬೆಂಗಳೂರು: ಪ್ರಸ್ತಾವಿತ ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಗಾಗಿ ಭೂಮಾಲೀಕರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಪರಿಹಾರ ನಿರ್ಧಾರವಾಗುವವರೆಗೆ ಅರ್ಜಿದಾರ ಭೂಮಾಲೀಕರ ಜಮೀನು ಸ್ವಾಧೀನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಟೌನ್‌ಶಿಪ್‌ಗಾಗಿ ನಡೆಸಿರುವ ಭೂಸ್ವಾಧೀನ ಪ್ರಕ್ರಿಯೆ ರದ್ದು ಕೋರಿ ಹೊಸೂರು ಗ್ರಾಮದ ಗಿರಿಜಮ್ಮ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಪರಿಹಾರದ ಮೊತ್ತ ನಿರ್ಧರಿಸುವವರೆಗೆ ಅರ್ಜಿದಾರರ ಜಮೀನಿಗೆ ಸಂಬಂಧಿಸಿದಂತೆ ಅವರಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಆದೇಶ ಮಾಡುವ ಸಂದರ್ಭ ನಿರ್ಮಾಣವಾಗಿಲ್ಲ ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತು.
ಜತೆಗೆ, ಪ್ರತಿವಾದಿಗಳಾದ ಕಂದಾಯ ಇಲಾಖೆ, ನಗರಾಭಿವೃದ್ಧಿ ಮತ್ತು ಅರಣ್ಯ ಇಲಾಖೆ, ಬೆಂಗಳೂರು ಮೆಟ್ರೊಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಭೂಸ್ವಾಧೀನ ಜಿಲ್ಲಾಧಿಕಾರಿ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿತು.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಸದ್ಯ 68 ಎಕರೆ ಮಾತ್ರ ಸ್ವಾಧೀನಕ್ಕೆ ಸಂಬಂಧಿಸಿದ್ದು, ಅರ್ಜಿದಾರರು 16 ಎಕರೆ ಸ್ವಾಧೀನ ಪ್ರಶ್ನಿಸಿದ್ದಾರೆ. ಅರ್ಜಿದಾರರೂ ಸೇರಿ ಹಲವು ಭೂ ಮಾಲೀಕರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರವನ್ನು ಇನ್ನಷ್ಟೇ ನಿರ್ಧರಿಸಬೇಕಿದ್ದು, ಪರಿಹಾರದ ಮೊತ್ತ ನಿರ್ಧರಿಸುವವರೆಗೆ ಅರ್ಜಿದಾರರ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರಲ್ಲದೆ, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.
ಅರ್ಜಿದಾರರ ವಾದವೇನು?
ಅರ್ಜಿದಾರರ ಪರ ವಕೀಲ ಎಂ.ಎಚ್. ಪ್ರಕಾಶ್ ವಾದ ಮಂಡಿಸಿ, ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಯೋಜನೆಗಾಗಿ ರೈತರ ಭೂಮಿ ವಶಪಡಿಸಿಕೊಳ್ಳುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಹತ್ತು ಗ್ರಾಮಗಳಿಗೆ ಸೇರಿದ 6,650 ಎಕರೆ ಭೂಮಿಯೂ ಒಳಗೊಂಡು 7,481 ಎಕರೆಯನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ, ಗ್ರಾಮದ ಸಾವಿರಾರು ಜನ ನಿರ್ಗತಿಕರಾಗುತ್ತಾರೆ. 2015ರಲ್ಲಿ 38 ಗ್ರಾಮಗಳನ್ನು ಅಧಿಸೂಚನೆಗೆ ಒಳಪಡಿಸಲಾಗಿತ್ತು. ಆನಂತರ, ಬಿಡದಿ ಟೌನ್‌ಶಿಪ್ ಅನ್ನು ಪ್ರಾಯೋಗಿಕ ಯೋಜನೆಯನ್ನಾಗಿ ಮಾಡಲು ನಿರ್ಧರಿಸಿ, ಉಳಿದ ಯೋಜನೆಗಳನ್ನು ಕೈಬಿಟ್ಟಿತ್ತು. 2006ರಲ್ಲಿ ಟೌನ್‌ಶಿಪ್ ಪ್ರಸ್ತಾವ ಚಾಲ್ತಿಗೆ ಬಂದಿದ್ದು, ಇದರಿಂದಾಗಿ ಈ ಪ್ರದೇಶವು 2 ದಶಕಗಳಿಂದ ಅಭಿವೃದ್ಧಿ ಕಂಡಿಲ್ಲ. ಆದರೆ, 2023ರಲ್ಲಿ ಯಾವುದೇ ನೈಜ ಸಾರ್ವಜನಿಕ ಉದ್ದೇಶವಿಲ್ಲದೇ ಹಳೆಯ ಯೋಜನೆಗೆ ಸ್ಮಾರ್ಟ್ ಹೆಸರು ನೀಡುವ ಮೂಲಕ ಅದನ್ನು ಚಾಲ್ತಿಗೆ ತರಲು ಯತ್ನಿಸಲಾಗಿದೆ ಎಂದು ವಿವರಿಸಿದರು.
ಲಾಭ ಮಾಡಿಕೊಳ್ಳುವ ಸಲುವಾಗಿ ಸಾರ್ವಜನಿಕ ಉದ್ದೇಶದ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸುಮಾರು 3 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ, ಇದು ಪರಿಸರದ ಮೇಲೆ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ ಹಾಗೂ ಸಾವಿರಾರು ನಿವಾಸಿಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.


Comments (0)