ವಿಸಿಟೇಷನ್ ಟೈಮ್ ಬದಲಿಗೆ ಪೇರೆಂಟಿಂಗ್ ಟೈಮ್ ಪದ ಬಳಕೆಯೇ ಸೂಕ್ತ – ಹೈಕೋರ್ಟ್
- by Legal Samachar Desk
- October 2, 2026
- 4 Views
ಬೆಂಗಳೂರು: ಮಕ್ಕಳ ಪಾಲನೆ-ಪೋಷಣೆ ಹಾಗೂ ಸುಪರ್ದಿ ಪ್ರಕರಣಗಳಲ್ಲಿ ಬಳಸುವ ವಿಸಿಟೇಷನ್ ಟೈಮ್ (ಭೇಟಿಯ ಸಮಯ) ಎಂಬ ಪದದ ಬದಲಿಗೆ ಪೇರೆಂಟಿಂಗ್ ಟೈಮ್ (ಪಾಲನೆಯ ಸಮಯ) ಎಂಬ ಪದ ಬಳಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಕ್ಕಳ ಭೇಟಿಯ ಹಕ್ಕು ಕುರಿತ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಗುವಿನ ಜೀವನದಲ್ಲಿ ಒಬ್ಬ ಪೋಷಕರು ಮಾತ್ರ ಮುಖ್ಯರಾಗಿದ್ದು, ಮತ್ತೊಬ್ಬರು ಕೇವಲ ಭೇಟಿ ನೀಡುವ ಅತಿಥಿಯಂತೆ ಕಾಣಿಸುವ ರೀತಿಯಲ್ಲಿ ‘ವಿಸಿಟೇಷನ್’ ಎಂಬ ಪದ ಬಳಕೆಯಾಗುತ್ತಿದೆ. ಮಗುವಿನ ಜೀವನದಲ್ಲಿ ಯಾವುದೇ ಪೋಷಕರು ಅತಿಥಿಗಳಲ್ಲ. ವಿಸಿಟೇಷನ್ ಎಂಬ ಪದವು ಒಬ್ಬ ಪೋಷಕರು ಮಾತ್ರ ಮಗುವಿನ ಜೀವನದ ಭಾಗವಾಗಿದ್ದು, ಮತ್ತೊಬ್ಬರು ಕೇವಲ ಬಂದು ಹೋಗುವ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ. ಆದ್ದರಿಂದ ‘ಪೇರೆಂಟಿಂಗ್ ಟೈಮ್’ ಎಂಬ ಪದವೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಮಗುವಿನ ಹಿತಾಸಕ್ತಿಯೇ ಮುಖ್ಯ:
ಕರ್ನಾಟಕ ಹೈಕೋರ್ಟ್ ರೂಪಿಸಿರುವ ಜಂಟಿ ಪೋಷಕತ್ವ ಯೋಜನೆಯನ್ನು ವಿಚಾರಣಾ ನ್ಯಾಯಾಲಯ ಅನುಸರಿಸಿರುವುದಕ್ಕೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದರೂ, ಪ್ರತಿಯೊಂದು ಪ್ರಕರಣದಲ್ಲೂ ಒಂದೇ ಮಾದರಿಯನ್ನು ಯಾಂತ್ರಿಕವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಯಾವುದೇ ಕಟ್ಟುನಿಟ್ಟಿನ ಸೂತ್ರವಿಲ್ಲ. ನ್ಯಾಯಾಲಯಗಳು ಪೋಷಕರು ಮತ್ತು ಮಕ್ಕಳ ಭಾವನೆಗಳು ಹಾಗೂ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಗಣಿಸಬೇಕು. ಮಗುವಿನ ಹಿತಾಸಕ್ತಿಯೇ ಪ್ರಧಾನವಾಗಿರಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪೋಷಕರ ನಡುವಿನ ವಿವಾದಕ್ಕಿಂತ ಮಗುವಿನ ಕಲ್ಯಾಣ ಮುಖ್ಯವಾಗಿದ್ದು, ಇಬ್ಬರೂ ಪೋಷಕರ ಪ್ರೀತಿ ಮತ್ತು ಮಮತೆ ಮಗುವಿಗೆ ದೊರೆಯುವಂತೆ ನ್ಯಾಯಾಲಯ ಕ್ರಮ ಕೈಗೊಳ್ಳಬೇಕು. ಆದರೆ, ಅಂತಹ ವ್ಯವಸ್ಥೆಯನ್ನು ಆತುರದಲ್ಲಿ ಜಾರಿಗೊಳಿಸಬಾರದು. ಪ್ರತಿ ದಿನ ಮಗುವಿಗೆ ನಿಗದಿತ ಅವಧಿಯಲ್ಲಿ ವಾಟ್ಸ್‌ಆ್ಯಪ್ ಕರೆ ಮಾಡಲು ಸೂಚಿಸಿರುವುದು ಪ್ರಾಯೋಗಿಕವಾಗಿಲ್ಲ. ಇದರಿಂದ, ಮಗು ಕಡ್ಡಾಯವಾಗಿ ನಿರ್ದಿಷ್ಟ ಸಮಯದವರೆಗೆ ಕುಳಿತು ಮಾತನಾಡಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜತೆಗೆ, ತಂದೆಗೆ ಮಗುವಿನ ಶಾಲಾ ರಜೆಗಳ ಶೇ.50 ಅವಧಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ತಾತ್ಕಾಲಿಕವಾಗಿ ಅಮಾನತುಪಡಿಸಿರುವ ಹೈಕೋರ್ಟ್, ತಂದೆಗೆ ಎರಡು ದಿನಗಳ ಕಾಲ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಮಗುವಿನೊಂದಿಗೆ ಪೇರೆಂಟಿಂಗ್ ಟೈಮ್ ಕಳೆಯಲು ಅವಕಾಶ ನೀಡಿದೆ.
ಪ್ರಕರಣವೇನು?
ಕೌಟುಂಬಿಕ ವ್ಯಾಜ್ಯ ಹೊಂದಿರುವ ದಂಪತಿ 2017ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, 9 ವರ್ಷದ ಮಗು ತಾಯಿಯ ಸುಪರ್ದಿಯಲ್ಲಿದೆ. ಮಗುವಿಗೆ ಮೂರು ತಿಂಗಳಾಗಿದ್ದಾಗ ತಂದೆ ಅದನ್ನು ಕೊನೆಯ ಬಾರಿ ನೋಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ತಂದೆಗೆ ವಾರಾಂತ್ಯಗಳಲ್ಲಿ ಮಗುವನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ಅಲ್ಲದೆ, ಶಾಲಾ ರಜೆಗಳ ಶೇ.50ರಷ್ಟು ಅವಧಿ ಹಾಗೂ ಪರ್ಯಾಯ ದಿನಗಳಲ್ಲಿ ವಾಟ್ಸ್‌ಆ್ಯಪ್ ಕರೆಗಳಿಗೆ ಅವಕಾಶ ಕಲ್ಪಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.


Comments (0)