ಇ.ಡಿ ಆಸ್ತಿ ಜಪ್ತಿ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸ್ವೀಕರಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದು; ಹೈಕೋರ್ಟ್

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ (ಇ.ಡಿ) ಹೊರಡಿಸುವ ಆಸ್ತಿ ಮುಟ್ಟುಗೋಲು ಆದೇಶವನ್ನು ಸಂವಿಧಾನದ ಪರಿಚ್ಛೇದ 226ರ ಅಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆಯಾದರೂ, ಅಂತಹ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಬೇಕೇ ಬೇಡವೇ ಎಂಬುದು ಸಂಪೂರ್ಣವಾಗಿ ನ್ಯಾಯಾಲಯದ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಹೈದರಾಬಾದ್‌ ಕರ್ನಾಟಕ ಎಜುಕೇಷನ್‌ ಸೊಸೈಟಿಯ ಮಾಜಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.

ಅರ್ಜಿ ವಿಲೇವಾರಿ ಮಾಡಿರುವ ಹೈಕೋರ್ಟ್‌, ಆದೇಶ ಪ್ರತಿ ಸ್ವೀಕರಿಸಿದ ದಿನದಿಂದ 30 ದಿನಗಳೊಳಗೆ ಪಿಎಂಎಲ್‌ಎ ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿದೆ. ಆ ಅವಧಿಯಲ್ಲಿ ಮೇಲ್ಮನವಿ ಸಲ್ಲಿಸಿದರೆ ವಿಳಂಬವನ್ನು ಪರಿಗಣಿಸದೆ ಪ್ರಕರಣದ ಅರ್ಹತೆಯ ಆಧಾರದಲ್ಲಿ ವಿಚಾರಣೆ ನಡೆಸಬೇಕು ಎಂದು ನ್ಯಾಯಮಂಡಳಿಗೆ ನಿರ್ದೇಶಿಸಿದೆ.

ಆದೇಶದಲ್ಲೇನಿದೆ?
ಆಸ್ತಿ ಜಪ್ತಿ ಆದೇಶದ ವಿರುದ್ಧ ಸಂವಿಧಾನದ ಪರಿಚ್ಛೇದ 226ರ ಅಡಿ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ 528ರ ಅಡಿಯಲ್ಲಿ ಸಲ್ಲಿಸುವ ಅರ್ಜಿ ನಿರ್ಣಾಯಕವಾಗಿದೆ. ಆದರೆ, ಅದನ್ನು ವಿಚಾರಣೆಗೆ ಸ್ವೀಕರಿಸುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯ ಎಂದು ನ್ಯಾಯಪೀಠ ತಿಳಿಸಿದೆ.

ಪಿಎಂಎಲ್‌ಎ ಒಂದು ಸಮಗ್ರ ಕಾಯ್ದೆಯಾಗಿದ್ದು, ಅದರಲ್ಲಿ ಸಕ್ಷಮ ಪ್ರಾಧಿಕಾರ ಮತ್ತು ಮೇಲ್ಮನವಿ ನ್ಯಾಯಮಂಡಳಿ ಸೇರಿದಂತೆ ಹಂತ ಹಂತವಾದ ಕಾನೂನು ಪರಿಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸಕ್ಷಮ ಪ್ರಾಧಿಕಾರದ ಆದೇಶವನ್ನು ಕಾಯ್ದೆಯ ಸೆಕ್ಷನ್‌ 26ರ ಅಡಿಯಲ್ಲಿ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಪ್ರಶ್ನಿಸಲು ಅವಕಾಶವಿರುವುದರಿಂದ, ಅರ್ಜಿದಾರರು ಮೊದಲು ಆ ಪರಿಹಾರ ಬಳಸಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:
282 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಂದ 2018ರ ಜನವರಿಯಿಂದ 2024ರ ಮಾರ್ಚ್‌ವರೆಗೆ 81.21 ಕೋಟಿಗೂ ಅಧಿಕ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪದ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ನಂತರ ಇ.ಡಿ 2024ರ ಜುಲೈ 18ರಂದು ಇಸಿಐಆರ್‌ ದಾಖಲಿಸಿ, ಅರ್ಜಿದಾರರು ಹಾಗೂ ಅವರ ಪುತ್ರರ ಹೆಸರಿನಲ್ಲಿದ್ದ ಬ್ಯಾಂಕ್‌ ಖಾತೆಗಳು ಮತ್ತು ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.

ಈ ಮಧ್ಯೆ, ಮೂಲ ಅಪರಾಧಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ 2025ರ ನವೆಂಬರ್ 20ರಂದು ರದ್ದುಗೊಳಿಸಿತ್ತು. ಈ ವಿಷಯವನ್ನು ಪಿಎಂಎಲ್‌ಎ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದಿದ್ದರೂ, 2025ರ ಡಿಸೆಂಬರ್ 11ರಂದು ಪ್ರಾಧಿಕಾರವು ಪಿಎಂಎಲ್‌ಎ ಸೆಕ್ಷ ನ್‌ 8(3)ರ ಅಡಿಯಲ್ಲಿ ಇ.ಡಿ ಹೊರಡಿಸಿದ್ದ ತಾತ್ಕಾಲಿಕ ಜಪ್ತಿ ಆದೇಶವನ್ನು ದೃಢಪಡಿಸಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌‌ನಲ್ಲಿ ಪ್ರಶ್ನಿಸಿದ್ದರು.

Related Articles

Comments (0)

Leave a Comment