ಸಿಎಂಐಡಿಪಿಯಲ್ಲಿ ತಾರತಮ್ಯ ಆರೋಪ; ಪಿಐಎಲ್‌ಗೆ ಆಕ್ಷೇಪಣೆ ಸಲ್ಲಿಸದ ಸರ್ಕಾರಕ್ಕೆ 2 ಸಾವಿರ ರೂ. ದಂಡ

ಬೆಂಗಳೂರು: 2025-26ನೇ ಆರ್ಥಿಕ ವರ್ಷದಲ್ಲಿ ಜಾರಿಗೆ ತರಲಾಗಿರುವ ‘ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’ (ಸಿಎಂಐಡಿಪಿ) ಅಡಿ ಶಾಸಕರಿಗೆ ಅನುದಾನ‌ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡಿರುವ ರಾಜ್ಯ ಸರ್ಕಾರಕ್ಕೆ 2 ಸಾವಿರ ರೂ. ದಂಡ ವಿಧಿಸಿರುವ ಹೈಕೋರ್ಟ್, 2 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಅಂತಿಮ ಅವಕಾಶ ನೀಡಿದೆ.

2025-26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಸಿಎಂಐಡಿಪಿ ಯೋಜನೆಯಡಿ ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂ. ಹಾಗೂ ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂ. ಅನುದಾನ ಹಂಚಿಕೆ ಮಾಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಆಕ್ಷೇಪಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ಶಾಸಕ ಜಗದೀಶ್ ಶಿವಯ್ಯ ಗುಡಗುಂಟಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರದ ಪರ ವಕೀಲರು ಪುನಃ ಕಾಲಾವಕಾಶ ಕೋರಿದರು.

ಆಗ ನ್ಯಾಯಪೀಠ, ಬಹುತೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ನ್ಯಾಯಾಲಯದ ಆದೇಶವಿದ್ದರೂ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಪದೇಪದೆ ಕಾಲಾವಕಾಶ ಕೋರುತ್ತಿರುವುದನ್ನು ಗಮನಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಅರ್ಜಿಯಲ್ಲಿಯೂ 2025 ಅಕ್ಟೋಬರ್ 29ಕ್ಕೆ ಆದೇಶ ಮಾಡಲಾಗಿದೆ. 2026ರ ಫೆಬ್ರವರಿ 17ರಂದು ಆಕ್ಷೇಪಣೆ ಸಲ್ಲಿಸಲು ಕೊನೇ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಐದಾರು ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದರೂ ಆಕ್ಷೇಪಣೆ ಸಲ್ಲಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು‌.

ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡುವುದಕ್ಕೆ ಕಾರಣಗಳು ಕಾಣುತ್ತಿಲ್ಲ. ಅದಾಗ್ಯೂ, ಕೊನೆಯ ಅವಕಾಶವಾಗಿ ಎರಡು ವಾರ ಸಮಯ ಕೊಡಲಾಗುವುದು. ಆದರೆ, ಈವರೆಗೆ ವಿಳಂಬ ಮಾಡಿರುವುದಕ್ಕೆ 2 ಸಾವಿರ ರೂ. ದಂಡ ವಿಧಿಸಲಾಗುತ್ತಿದ್ದು, ಅದನ್ನು ವಕೀಲರ ಗುಮಾಸ್ತರ ಸಂಘಕ್ಕೆ ಪಾವತಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.

Related Articles

Comments (0)

Leave a Comment