ಮಡಿಕೇರಿ ದಸರಾ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿ ಕೋರಿದ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಮಡಿಕೇರಿ ದಸರಾ ಆಚರಣೆ ಹಿನ್ನೆಲೆಯಲ್ಲಿ ಸ್ತಬ್ಧಚಿತ್ರಗಳ ಮೆರೆವಣಿಗೆ ವೇಳೆ ಡಿಜೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವ ವಿಚಾರಕ್ಕೆ ಸಂಬಂದಿಸಿದ ಅರ್ಜಿಯಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಪಂಡೀರಾ ಟಿ. ಪೂಣಚ್ಚ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಎಸ್‌) ನೋಟಿಸ್‌ ಜಾರಿಗೊಳಿಸಿತು‌. ಜತೆಗೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿತು‌.

ಅರ್ಜಿಯಲ್ಲೇನಿದೆ?
ಮಡಿಕೇರಿ ಪಟ್ಟಣದಲ್ಲಿ 2026ರ ಅಕ್ಟೋಬರ್ 21 ಹಾಗೂ 22ರಂದು ದಸರಾ ಮಹೋತ್ಸವ ಆಚರಿಸಲಾಗುತ್ತಿದೆ. ಮಡಿಕೇರಿ ಪಟ್ಟಣದಲ್ಲಿ ದಸರಾ ಮಹೋತ್ಸವ ನಿರ್ವಹಣೆಗಾಗಿ ಕರವಲೆ ಭಗವತಿ ಮಹಿಷ ಮರ್ದಿನಿ ಹಾಗೂ ಕುಂದೂರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನ ಸೇರಿದಂತೆ ಮಡಿಕೇರಿಯ 10 ದೇವಸ್ಥಾನಗಳ ಸಮಿತಿಯನ್ನು ದಸರಾ ದಶಮಂಟಪ ಸಮಿತಿ ಅಡಿಯಲ್ಲಿ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಪ್ರತಿಯೊಂದು ದೇವಸ್ಥಾನದ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರತಿ ದೇವಸ್ಥಾನದ ಸ್ತಬ್ಧಚಿತ್ರದ ಮೆರವಣಿಗೆಯು ಆಯಾ ದೇವಸ್ಥಾನದ ಆವರಣದಿಂದ ಆರಂಭವಾಗಿ ರಾತ್ರಿ 10ಕ್ಕೆ ತಿಮ್ಮಯ್ಯ ವೃತ್ತದ ಬಳಿ ಸೇರುತ್ತವೆ. ಅಲ್ಲಿಂದ ಬೆಳಗ್ಗೆ 6 ಗಂಟೆಯವರೆಗೆ ಸ್ತಬ್ಧಚಿತ್ರ ಮೆರೆವಣಿಗೆಯು ರಾಜಬೀದಿ ಮಾರ್ಗವಾಗಿ ಬನ್ನಿಮಂಟಪವರೆಗೆ ದೀಪಾಲಂಕಾರ ಮತ್ತು ಡಿಜೆ ಧ್ವನಿವರ್ಧಕಗಳೊಂದಿಗೆ ಸಾಗುತ್ತದೆ. ಇದು ಮಡಿಕೇರಿ ದಸರಾ ಸಮಾರಂಭದ ಮುಖ್ಯ ಆಕರ್ಷಣೆಯಾಗಿದೆ. ಸ್ತಬ್ಧಚಿತ್ರ ಮೆರವಣಿಗೆ ಕಳೆದ 40 ವರ್ಷಗಳಿಂದ ಮಡಿಕೇರಿ ಪಟ್ಟಣದಲ್ಲಿ ನಡೆಸಲಾಗುತ್ತಿದೆ. 2026ರ ಅಕ್ಟೋಬರ್ 21 ಮತ್ತು 22ರಂದು ಡಿಜೆ ಧನ್ವಿವರ್ಧಕ ಬಳಕೆಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, 15 ದಿನ ಕಳೆದರೂ ಸರ್ಕಾರದಿಂದ ಈವರೆಗೆ ಅನುಮತಿ ದೊರೆತಿಲ್ಲ. ಆದ್ದರಿಂದ, ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment