ಕೆಪಿಎಸ್‌ಸಿ ನೇಮಕಾತಿ ಹಗರಣ; ಬುಧವಾರ ಹೈಕೋರ್ಟ್‌ನಲ್ಲಿ ಶಾಂತಾ ಹೊಸಮನಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
- by LegalSamachar
- October 6, 2026
- 6 Views
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಆಯೋಗದ ಸದಸ್ಯೆ ಡಾ. ಶಾಂತಾ ಹೊಸಮನಿ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಶಾಂತಾ ಹೊಸಮನಿ ಸಲ್ಲಿಸಿರುವ ಅರ್ಜಿ ಕುರಿತು ಮಂಗಳವಾರ ಕೆಲ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಅಕ್ಟೋಬರ್ 7) ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ನೇಮಕಾತಿಗೆ 2025ರ ಜುಲೈನಲ್ಲಿ ತಡೆ ನೀಡಲಾಗಿದೆ. ಪ್ರಕ್ರಿಯೆ ಮುಗಿಸುವುದನ್ನು ಮುಂದುವರಿಸಲು ಆದೇಶಿಸಲಾಗಿತ್ತು. ಆದರೆ, ನ್ಯಾಯಾಲಯದ ಅನುಮತಿ ಇಲ್ಲದೇ ಅಂತಿಮ ಆಯ್ಕೆಪಟ್ಟಿ ಫಲಿತಾಂಶ ಪ್ರಕಟಿಸದಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠದಿಂದ ತಡೆ ಇದೆ. ಆದರೆ, ಆ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಆರೋಪವಿರುವ ಹಿನ್ನೆಲೆಯಲ್ಲಿ ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರು, ಅರ್ಜಿದಾರರು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಹೆಚ್ಚು ಅಂಕ ನೀಡಿರುವ ಆರೋಪವಿದೆ. ನಿರ್ದಿಷ್ಟ ದಿನದಂದು ಸಂದರ್ಶನಕ್ಕೆ ಹಾಜರಾಗಿದ್ದ ಎಲ್ಲ ಅಭ್ಯರ್ಥಿಗಳ ಅಂಕಗಳನ್ನು ನ್ಯಾಯಪೀಠ ಪರಿಶೀಲಿಸಬೇಕು ಎಂದರು.
ಕೆಪಿಎಸ್‌ಸಿ ಪರ ಹಾಜರಿದ್ದ ವಕೀಲೆ ಎಂ.ಆರ್. ಸಿಂಚನಾ, ಪ್ರಕರಣದ ಸಂಬಂಧ ಆಯೋಗದ ಸಹಾಯಕ ಕಾರ್ಯದರ್ಶಿ ನೀಡಿರುವ ವರದಿ ಸಲ್ಲಿಸುತ್ತಿದ್ದೇನೆ. ನಿಯಮದ ಪ್ರಕಾರ ಒಂಬತ್ತು ಮಂದಿ ಇದ್ದರು. ಬೆಳಗ್ಗೆ ಐದು ಸಂಜೆ ನಾಲ್ಕು ಮಂದಿ ಸಂದರ್ಶನವಾಗಿತ್ತು. ಕೆಪಿಎಸ್‌ಸಿಯ ಮೂವರು ಮಂದಿ ಸಂದರ್ಶನ ನಡೆಸಿದ್ದರು. ಗೆಜೆಟೆಡ್ ಪ್ರೊಬೇಷನರ್ ನೇಮಕದ ಅಂತಿಮ ಆಯ್ಕೆ ಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೆಪಿಎಸ್‌ಸಿ ಪರ ವಕೀಲರು ಮುಚ್ಚಿದ ಲಕೋಟೆಯಲ್ಲಿ ಕೆಪಿಎಸ್‌ಸಿ ಸಮಿತಿಯು ಅರ್ಜಿದಾರರಿಗೆ 2026ರ ಮೇ 8 ರಂದು ನಡೆದ ಸಂದರ್ಶನದಲ್ಲಿ ನೀಡಿರುವ ಅಂಕಪಟ್ಟಿ ಸಲ್ಲಿಸಿದ್ದಾರೆ. ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಕೆಪಿಎಸ್‌ಸಿ ಸಮಿತಿಯು ಎಲ್ಲ ಒಂಬತ್ತು ಮಂದಿಗೆ ನೀಡಿರುವ ಅಂಕಗಳನ್ನು ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.
ಈ ಹಂತದಲ್ಲಿಅರ್ಜಿದಾರರ ಪರ ವಕೀಲರು, ಶಾಂತಾ ಹೊಸಮನಿ ವಿರುದ್ಧ ಆತುರದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು ಎಂದು ಕೋರಿದರು.
ಅದಕ್ಕೆ ನ್ಯಾಯಾಲಯ, ಈ ಹಂತದಲ್ಲಿಯಾವುದೇ ಮಧ್ಯಂತರ ಆದೇಶವಿಲ್ಲ. ಮಹಿಳೆಯ ವಿರುದ್ಧ ಆರೋಪವಿದೆ, ಆಕೆಯಿಂದಲೇ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ. ಆದ್ದರಿಂದ, ಬುಧವಾರ ನೋಡೋಣ ಎಂದು ಮೌಖಿಕವಾಗಿ ಹೇಳಿತು.
Related Articles
Thank you for your comment. It is awaiting moderation.


Comments (0)