ಕುಟುಂಬದ ಮೃತರು–ಹಾಲಿ ಸದಸ್ಯರ ವಾಸಸ್ಥಳ ಭಿನ್ನತೆ ಆಧಾರದಲ್ಲಿ ವಂಶವೃಕ್ಷ ಪ್ರಮಾಣಪತ್ರ ನಿರಾಕರಣೆ ಸಲ್ಲ; ಹೈಕೋರ್ಟ್
- by LegalSamachar
- October 6, 2026
- 6 Views
ಬೆಂಗಳೂರು: ಕುಟುಂಬದ ಮೃತ ಪೂರ್ವಜರು ಹಾಗೂ ಜೀವಂತವಾಗಿರುವ ಸದಸ್ಯರು ಬೇರೆ ಬೇರೆ ಸ್ಥಳಗಳ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕಂದಾಯ ಅಧಿಕಾರಿಗಳು ವಂಶವೃಕ್ಷದ ಪ್ರಮಾಣಪತ್ರ ವಿತರಿಸಲು ನಿರಾಕರಿಸುವುದು ಸಮರ್ಥನೀಯವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕುಟುಂಬದ ಸದಸ್ಯರ ವಂಶವೃಕ್ಷ ಪ್ರಮಾಣಪತ್ರ ವಿತರಿಸಲು ನಿರಾಕರಿಸಿದ್ದ ಬೆಂಗಳೂರು ನಗರ ದಕ್ಷಿಣ ತಾಲೂಕಿನ ತಾವರೆಕೆರೆ ಉಪ ವಲಯದ ತಹಶೀಲ್ದಾರ್ ಹಾಗೂ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಬಿ.ಎಸ್. ಅಭಿನಂದನ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಕೆಲವರು ತಹಶೀಲ್ದಾರ್ ಅವರ ವ್ಯಾಪ್ತಿ ಪ್ರದೇಶದಲ್ಲಿ ವಾಸಿಸುತ್ತಿಲ್ಲ ಎಂಬ ಕಾರಣ ನೀಡಿ ಅಭಿನಂದನ್ ಅವರ ‘ಸಕಾಲ ಮೇಲ್ಮನವಿ’ಯನ್ನು ತಿರಸ್ಕರಿಸಿದ್ದ 2021ರ ಡಿಸೆಂಬರ್ 27ರ ಆದೇಶವನ್ನು ನ್ಯಾಯಪೀಠ ರದ್ದುಪಡಿಸಿದೆ.
ಕರ್ನಾಟಕ ಸಕಾಲ ಸೇವೆಗಳ ಕಾಯ್ದೆ-2011ರಲ್ಲಿ ಕಂದಾಯ ಇಲಾಖೆ ಶೀರ್ಷಿಕೆಯಡಿಯ ಕ್ರಮ ಸಂಖ್ಯೆ 16ರಲ್ಲಿ ಉಲ್ಲೇಖಿಸಿರುವಂತೆ ಬದುಕುಳಿದ ಕುಟುಂಬದ ಸದಸ್ಯರ ಪ್ರಮಾಣಪತ್ರ ವಿತರಿಸಲು ತಹಶೀಲ್ದಾರ್ ಸಕ್ಷಮ ಅಧಿಕಾರಿಯಾಗಿದ್ದಾರೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕಾನೂನುಬದ್ಧ ಉತ್ತರಾಧಿಕಾರ ಅಥವಾ ಕಾನೂನು ಪ್ರತಿನಿಧಿಗಳ ಸ್ಥಿತಿಗೆ ಸಂಬಂಧಿಸಿದ ಯಾವುದೇ ವಿವಾದವನ್ನು, ಸಾಕ್ಷ್ಯಗಳನ್ನು ನಿಯಂತ್ರಿಸುವ ಕಾನೂನುಗಳಿಗೆ ಒಳಪಟ್ಟ ಸಮರ್ಥ ಸಿವಿಲ್ ನ್ಯಾಯಾಲಯ ಮಾತ್ರವೇ ನಿರ್ಣಯಿಸಬೇಕು ಎಂದೂ ವಿವರಿಸಿದೆ.
ವಂಶವೃಕ್ಷ ಅಥವಾ ಬದುಕುಳಿದಿರುವವರ ಪ್ರಮಾಣಪತ್ರ ನೀಡಲು, ಸಂಬಂಧಪಟ್ಟ ಕಂದಾಯ ಅಧಿಕಾರಿಯ ತಹಶೀಲ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮೃತ ಪೂರ್ವಜರು ಅಥವಾ ಕುಟುಂಬದ ಸದಸ್ಯರ ವಂಶಸ್ಥರು ಅಥವಾ ಅಗತ್ಯ ದಾಖಲೆ ಹೊಂದಿರುವ ಕಾನೂನುಬದ್ಧ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ವ್ಯಕ್ತಿಗಳೇ ಸಾಕಾಗುತ್ತದೆ. ಈ ನಿಟ್ಟಿನಲ್ಲಿ ಹಾಲಿ ಪ್ರಕರಣದಲ್ಲಿ ತಹಶೀಲ್ದಾರ್ ಅವರು 2026ರ ಜುಲೈ 17ರ ಸುತ್ತೋಲೆಯ ಅನುಸಾರ ಅರ್ಜಿದಾರರಿಗೆ ವಂಶವೃಕ್ಷ ಪ್ರಮಾಣ ಪತ್ರ ವಿತರಿಸಬೇಕು ಎಂದು ನಿರ್ದೇಶಿಸಿದೆ.
ಕುಟುಂಬದ ಸದಸ್ಯರ ಮರಣದ ನಂತರ, ಕಂದಾಯ ದಾಖಲೆಗಳಲ್ಲಿ ಕಾನೂನುಬದ್ಧ ಉತ್ತರಾಧಿಕಾರಿಗಳ ಹೆಸರುಗಳ ರೂಪಾಂತರ, ಉದ್ಯೋಗವನ್ನು ಪಡೆಯುವುದು, ಆಸ್ತಿ ವಹಿವಾಟು, ಪಾಲು ದಾವೆ, ಪರಿಹಾರ ಹಕ್ಕುಗಳು ಸೇರಿದಂತೆ ಹಲವಾರು ಆಡಳಿತಾತ್ಮಕ ಉದ್ದೇಶಗಳಿಗಾಗಿ ಬದುಕುಳಿದವರ ಪ್ರಮಾಣಪತ್ರ, ವಂಶಾವಳಿ ಅಥವಾ ವಂಶವೃಕ್ಷವು ಅಗತ್ಯವಾಗಿರುತ್ತದೆ ಎಂಬುದು ಗಮನಾರ್ಹ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ವಂಶಾವಳಿಯು ಮೂಲ ಪೂರ್ವಜರಿಂದ ಬಂದಿದೆ ಮತ್ತು ಮರಣದ ಮೊದಲು ಅವರ ಶಾಶ್ವತ ವಾಸಸ್ಥಳವು ನಿರ್ಣಾಯಕ ಅಂಶವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು ಎಂದಿರುವ ನ್ಯಾಯಪೀಠ, ಕಂದಾಯ ಅಧಿಕಾರಿಗಳ ಸ್ಥಳೀಯ ತಪಾಸಣೆ, ವಿಚಾರಣೆಯ ಸಮಯದಲ್ಲಿ ಯಾವುದೇ ಆಕ್ಷೇಪಣೆ ಅಥವಾ ವಿವಾದಗಳು ಕಂಡುಬಂದಿಲ್ಲದೇ ಇದ್ದರೆ, ಅಂತಹ ಪ್ರಮಾಣಪತ್ರ ವಿತರಿಸಲು ನಿರಾಕರಿಸುವುದು ಸೂಕ್ತವಲ್ಲ ಎಂದು ತಿಳಿಸಿದೆ.
ನಿವಾಸ ಪ್ರಮಾಣಪತ್ರ ಕೋರುವ ವ್ಯಕ್ತಿ ಸಂಬಂಧಪಟ್ಟ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಗದಿತ ಅವಧಿಯವರೆಗೆ ವಾಸವಾಗಿರುವುದು ಕಡ್ಡಾಯವಾಗಿರಬಹುದು. ಆದರೆ, ವಂಶವೃಕ್ಷದ ಮೂಲ ಪೂರ್ವಜರಿಂದಲೇ ಆರಂಭವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಜತೆಗೆ, ನಿಧನಕ್ಕೂ ಮುನ್ನ ವ್ಯಕ್ತಿಯೊಬ್ಬರು ಶಾಶ್ವತವಾಗಿ ನೆಲೆಸಿದ್ದ ಸ್ಥಳವೇ ನಿರ್ಣಾಯಕ ಅಂಶವಾಗಿರುತ್ತದೆ. ಆದ್ದರಿಂದ, ವಂಶವೃಕ್ಷ ಪ್ರಮಾಣಪತ್ರ ನೀಡುವುದನ್ನು ನಿವಾಸ ಪ್ರಮಾಣಪತ್ರ ನೀಡುವುದಕ್ಕೆ ಸಮೀಕರಣ ಮಾಡಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಅರ್ಜಿದಾರರು ತಮ್ಮ ಕುಟುಂಬದ 11 ಸದಸ್ಯರನ್ನು ಒಳಗೊಂಡ ವಂಶವೃಕ್ಷ ಪ್ರಮಾಣಪತ್ರ ವಿತರಿಸುವಂತೆ ಕೋರಿ ತಾವರೆಕೆರೆಯ ಉಪ ವಲಯದ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕುಟುಂಬದ ಎಲ್ಲ ಸದಸ್ಯರ ವಿಳಾಸದ ದಾಖಲೆ ಮತ್ತು ಮೃತಪಟ್ಟಿರುವ ಸದಸ್ಯರ ಮರಣ ಪ್ರಮಾಣಪತ್ರವನ್ನು ಒದಗಿಸಿಲ್ಲ ಎಂಬ ಕಾರಣ ನೀಡಿ ತಹಶೀಲ್ದಾರ್ ಅರ್ಜಿ ತಿರಸ್ಕರಿಸಿದ್ದರು. ತಹಶೀಲ್ದಾರ್ ಅವರ ಆದೇಶವನ್ನು ಉಪ ವಿಭಾಗಾಧಿಕಾರಿಗಳೂ ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)