ಮದ್ಯದ ಬಾಟಲಿ ಹಿಡಿದು ಕೋರ್ಟ್‌ಗೆ ಹೋಗಲು ಆಗುತ್ತದೆ, ಕೇಸ್ ಕರೆದಾಗ ಹಾಜರಾಗಲು ಸಾಧ್ಯವಿಲ್ಲವೇ?; ಆರೋಪಿಯ ನಡೆಗೆ ಹೈಕೋರ್ಟ್ ಕಿಡಿ
- by LegalSamachar
- May 22, 2026
- 5 Views
ಬೆಂಗಳೂರು: ನ್ಯಾಯಾಲಯದ ಆವರಣಕ್ಕೆ ಮದ್ಯದ ಬಾಟಲಿ ಹಿಡಿದು ಬಂದಿದ್ದಲ್ಲದೇ, ಪ್ರಕರಣ ಕರೆದಾಗ ಪೀಠದ ಮುಂದೆ ಹಾಜರಾಗದ ಆರೋಪಿಗೆ (ಕೊಲೆ ಯತ್ನ ಪ್ರಕರಣ) ಜಾಮೀನು ರದ್ದುಪಡಿಸಿರುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ.
ಜಾಮೀನು ರದ್ದುಪಡಿಸಿ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು 2026ರ ಜನವರಿರಂದು ಹೊರಡಿಸಿರುವ ಆದೇಶ ರದ್ದು ಕೋರಿ ಮೈಸೂರು ತಾಲೂಕಿನ ಬೆಳವಾಡಿಯ ಶಿವಕುಮಾರ್ ಅಲಿಯಾಸ್ ಶಿವು ಅಲಿಯಾಸ್ ಆರ್‌ಎಕ್ಸ್ ಶಿವು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ರಜಾಕಾಲೀನ ಏಕಸದಸ್ಯ ನ್ಯಾಯಪೀಠ ಗುರುವಾರ (ಮೇ 21) ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಸಿ.ಎನ್. ರಾಜು ವಾದ ಮಂಡಿಸಿ, ಜಾಮೀನು ರದ್ದುಪಡಿಸುವುದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ, ಒಂದು ಅವಕಾಶ ನೀಡಬೇಕಿತ್ತು. ಕಾನೂನಿನ ಪ್ರಕಾರ ಬೇರೆ ಪ್ರಕರಣ ದಾಖಲಿಸಬಹುದಿತ್ತು. ಆರೋಪಿಯು ಕೃಷಿಕರಾಗಿದ್ದು, ಒಂದು ತಿಂಗಳಿಂದ ಕಸ್ಟಡಿಯಲ್ಲಿದ್ದಾರೆ. ಪೊಲೀಸರ ಹೇಳಿಕೆಯ ಮೇಲೆ ಬಂಧಿಸಲಾಗಿದೆ ಎಂದರು.
ಆಗ ನ್ಯಾಯಪೀಠ, ವಿಚಾರಣೆಯ ದಿನ ಅರ್ಜಿದಾರರು ನ್ಯಾಯಾಲಯದಲ್ಲಿ ಮದ್ಯದ ಬಾಟಲಿ ಹಿಡಿದಿದ್ದರು. ಇದನ್ನು ವಿಚಾರಣಾ ನ್ಯಾಯಾಧೀಶರು ವಿಡಿಯೊದಲ್ಲಿ ನೋಡಿದ್ದಾರೆ. ಪ್ರಕರಣ ಕರೆದಾಗ ಅರ್ಜಿದಾರರು ಕೋರ್ಟ್ ಮುಂದೆ ಹಾಜರಾಗಿಲ್ಲ. ಮುಂದಿನ ವಿಚಾರಣೆಯಂದೂ ಗೈರಾಗಿದ್ದಾರೆ. ಕುಡಿಯೋಕೆ ಬಾಟಲಿ ತೆಗೆದುಕೊಂಡು ಕೋರ್ಟ್‌ಗೆ ಹೋಗುವುದಕ್ಕೆ ಆಗುತ್ತದೆ, ಕೇಸ್ ಕರೆದಾಗ ಪೀಠದ ಮುಂದೆ ಹಾಜರಾಗಲಾಗುವುದಿಲ್ಲ ಎಂದರೆ ಜಾಮೀನು ರದ್ದುಪಡಿಸದೇ ವಿಚಾರಣಾಧೀನ ನ್ಯಾಯಾಲಯ ಮತ್ತೇನು ಮಾಡಲಾಗುತ್ತದೆ ಎಂದು ಕಿಡಿಕಾರಿತು.
ಮುಂದುವರಿದು, ನಿಮಗೆ ಇನ್ನು ಕೋರ್ಟ್‌ನಲ್ಲಿ ಒಂದು ಬಾಟಲಿ ಇಟ್ಟು ಕರೆಯಬೇಕಾಗುತ್ತದೆ ಅಷ್ಟೆ. ಆರೋಪಿ ಇನ್ನೂ ಸ್ಪಲ್ಪ ದಿನ ಜೈಲಿನಲ್ಲಿರಲಿ. ಮದ್ಯ ವ್ಯಸನದಿಂದ ಆತ ಹೊರಬರುತ್ತಾನೆ. ಇನ್ನೂ 2 ತಿಂಗಳು ಜೈಲಿನಲ್ಲಿದ್ದರೂ ಪರವಾಗಿಲ್ಲ. ಏನೂ ಆಗುವುದಿಲ್ಲ. ವ್ಯಸನ ಮುಕ್ತನಾಗುತ್ತಾನೆ. ಖಾಸಗಿ ವ್ಯಕ್ತಿ ಆರೋಪ ಮಾಡಿದ್ದರೆ ಅದನ್ನು ಆರೋಪ ಎನ್ನಬಹುದಿತ್ತು. ಈ ವಿಡಿಯೊವನ್ನು ನೋಡಿ, ಅದನ್ನು ನ್ಯಾಯಾಧೀಶರು ರೆಕಾರ್ಡ್ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತು.
ಈ ಹಂತದಲ್ಲಿ ಅರ್ಜಿದಾರರ ಪರ ವಕೀಲರು, ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಅಲ್ಲಿ ಮದ್ಯ ಇತ್ತು ಎಂದು ಹೇಗೆ ಗೊತ್ತಾಗುತ್ತದೆ? ಎಂದರು. ಇದರಿಂದ, ಮತ್ತಷ್ಟು ಆಕ್ರೋಶಗೊಂಡ ನ್ಯಾಯಪೀಠ, ತನಿಖೆ ನಡೆಸಿ, ಅಲ್ಲಿ ಸತ್ಯ ಎಂದು ಸಾಬೀತಾದರೆ ವಿಚಾರಣೆಯ ಪೂರ್ತಿ ಸಮಯ ನಿಮ್ಮನ್ನು ಜೈಲಿನಲ್ಲಿ ಇಡಬಹುದೇ? ನಿಮ್ಮ ಕಕ್ಷಿದಾರ ಸರಿಯಾಗಿ ನಡೆದುಕೊಳ್ಳಬೇಕಿತ್ತು. ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಸ್ವಲ್ಪದಿನ ಅಲ್ಲೇ ಬಿಡಿ, ಅವರು ಸರಿ ಹೋಗುತ್ತಾರೆ. ನ್ಯಾಯಾಲಯದ ಅಧಿಕಾರಿಯಾಗಿ ಇದಕ್ಕೆ ನೀವು ಪ್ರೋತ್ಸಾಹ ನೀಡಬಾರದು. ಕಕ್ಷಿದಾರರನ್ನು ಸಮರ್ಥಿಸುವುದು ನಿಮ್ಮ ವೃತ್ತಿ. ಆದರೆ, ನ್ಯಾಯಾಲಯದ ಬಗ್ಗೆ ಗಂಭೀರವಾಗಿರಬೇಕು ಎಂದು ತೀಕ್ಷ್ಣವಾಗಿ ನುಡಿಯಿತು.
ಅಂತಿಮವಾಗಿ ನ್ಯಾಯಪೀಠ, ಆರೋಪಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)