ಡಾ. ಡಿ. ವೀರೇಂದ್ರ ಹೆಗ್ಗಡೆ ಪರ ಪ್ರತಿಬಂಧಕಾದೇಶಗಳ ಜಾರಿಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- May 22, 2026
- 5 Views
ಬೆಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದ ಪರವಾಗಿ ಸಿವಿಲ್ ನ್ಯಾಯಾಲಯಗಳು ಹೊರಡಿಸಿರುವ ಪ್ರತಿಬಂಧಕಾದೇಶಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ನಂದೀಶ್ ಕುಮಾರ್ ಜೈನ್ ಹಾಗೂ ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಪುತ್ರ ಡಿ. ನಿಶ್ಚಲ್ ಸಲ್ಲಿಸಿರುವ ಅರ್ಜಿಯನ್ನು ಗುರುವಾರ (ಮೇ 21) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಎಡಿಜಿಪಿ, ನಗರ ಪೊಲೀಸ್ ಆಯುಕ್ತರು ಹಾಗೂ ಕೇಂದ್ರ ವಿಭಾಗದ ಸಿಇಎನ್ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿದಾರರ ಪರವಾಗಿ ಸಿವಿಲ್ ನ್ಯಾಯಾಲಯಗಳು ಹೊರಡಿಸಿರುವ ಪ್ರತಿಬಂಧಕಾದೇಶಗಳನ್ನು ಜಾರಿಗೊಳಿಸಲು ಸಂಬಂಧಪಟ್ಟ ಪ್ರತಿವಾದಿಗಳು ಕಾನೂನುಬದ್ಧವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿತು.
ಪ್ರತಿಬಂಧಕಾದೇಶಗಳ ವಿವರ ಒದಗಿಸಿದ್ದ ಅರ್ಜಿದಾರರು:
ಆದಿತ್ಯಕಿರಣ್ ಕ್ರಿಯೇಷನ್ಸ್ ವ್ಲಾಗ್ಸ್, ಅಶ್ವವೇಗ ಸ್ಪೆಷಲ್, ಅವನಿಯಾನ, ಡಿಟಾಕ್ಸ್, ಫಸ್ಟ್ ವಾಯ್ಸ್ ಕನ್ನಡ ನ್ಯೂಸ್, ಗಿರೀಶ್ ಮಟ್ಟೆಣ್ಣವರ್, ಜನತಾ ಏಜೆಂಟ್, ಲೇಖನಿ ನ್ಯೂಸ್ ಕನ್ನಡ, ಮಿಸ್ಟರ್ ಅಣ್ಣಬಾಂಡ್, ಪ್ರಜಾಧ್ವನಿ ಟಿವಿ, ಆರ್ವಿಕೆ ಸ್ಟುಡಿಯೋಸ್, ಸ್ಪೀಡ್ ನ್ಯೂಸ್ ಕನ್ನಡ, ಯುನೈಟೆಡ್ ಮೀಡಿಯಾ, ವಾರ್ತಾ ಭಾರತಿ, ರೈಟ್ ನ್ಯೂಸ್, ಜ್ವಾಲಾಮುಖಿ ನ್ಯೂಸ್ ಹಾಗೂ ಸೌಜನ್ಯಾ ನ್ಯೂಸ್ಗಳ ವಿರುದ್ಧ ವಿಚಾರಣಾ ನ್ಯಾಯಾಲಯಗಳು ಹೊರಡಿಸಿದ್ದ ಪ್ರತಿಬಂಧಕಾದೇಶಗಳ ವಿವರಗಳನ್ನು ಅರ್ಜಿದಾರರ ಪರ ವಕೀಲರು ಹೈಕೋರ್ಟ್ಗೆ ಒದಗಿಸಿದ್ದರು.
ಮೇಲಿನ ಎಲ್ಲ ಸಾಮಾಜಿಕ ಮಾಧ್ಯಮಗಳು ಹಾಗೂ ಮಾಧ್ಯಮಗಳ ಜತೆಗೆ ಸೆಂಟರ್ ಪಾಯಿಂಟ್ ಕನ್ನಡ, ಸುದ್ದಿ 18, ತರ್ಲೆ ಕಪಲ್ ನ್ಯೂಸ್, ಫೋಕಸ್ ಟಿವಿ, ಚಕ್ರವರ್ತಿ ಯೂಟ್ಯೂಬ್ ಚಾನಲ್ ಸೇರಿ ಅರ್ಜಿಯಲ್ಲಿ 22 ಮಾಧ್ಯಮಗಳನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಅರ್ಜಿದಾರರ ಮನವಿ:
• ನ್ಯಾಯಾಲಯದ ಪ್ರತಿಬಂಧಕಾದೇಶಗಳನ್ನು ಉಲ್ಲಂಘಿಸಿರುವ ಪ್ರತಿವಾದಿಗಳ ಯೂಟ್ಯೂಬ್ ಚಾನೆಲ್ಗಳು, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳನ್ನು ಅಳಿಸಲು/ಬ್ಲಾಕ್ ಮಾಡಲು ಸಿಇಎನ್ ಪೊಲೀಸರು, ಗೂಗಲ್, ಇನ್ಸ್ಟಾಗ್ರಾಂ ಹಾಗೂ ಮೆಟಾ ಸಂಸ್ಥೆಗಳಿಗೆ ನಿರ್ದೇಶಿಸಬೇಕು.
• ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಯಾವುದೇ ಸುಳ್ಳು, ಕ್ಷುಲ್ಲಕ, ನಿಂದನಾತ್ಮಕ ವಿಚಾರಗಳನ್ನು ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಮಾಧ್ಯಮಗಳಲ್ಲಿ ಪ್ರಕಟಿಸದಂತೆ, ಪ್ರಸಾರ ಮಾಡದಂತೆ, ಅಪ್ಲೋಡ್ ಮಾಡದಂತೆ, ಫಾರ್ವರ್ಡ್ ಮಾಡದಂತೆ ಹಾಗೂ ಹಂಚಿಕೊಳ್ಳದಂತೆ ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಬೇಕು.
• ಧರ್ಮಾಧಿಕಾರಿಗಳು, ಕುಟುಂಬ ಸದಸ್ಯರು, ಸಂಸ್ಥೆಗಳ ವಿರುದ್ಧ ಚರ್ಚೆ, ಸಂವಾದ, ಅಪಪ್ರಚಾರ ಮಾಡಲು ಹಾಗೂ ಅವಹೇಳನಕಾರಿ ಆರೋಪಗಳನ್ನು ಮಾಡಲು ಉದ್ದೇಶಿಸಿರುವ ಯಾವುದೇ ಹೊಸ ಮಾಧ್ಯಮ ಚಾನೆಲ್ಗಳು, ವೇದಿಕೆಗಳು ಅಥವಾ ಸಾಮಾಜಿಕ ಮಾಧ್ಯಮಗಳ ಹ್ಯಾಂಡಲ್ಗಳನ್ನು ರಚಿಸದಂತೆ ಅಥವಾ ಪ್ರಸಾರ ಮಾಡದಂತೆ ಪ್ರತಿವಾದಿ ಚಾನೆಲ್ಗಳಿಗೆ ನಿರ್ಬಂಧ ವಿಧಿಸಬೇಕು.
ಅರ್ಜಿದಾರರ ಆಕ್ಷೇಪವೇನು?
ಹಲವು ವ್ಯಕ್ತಿಗಳು ಗುರುತು ಮರೆಮಾಚಲು ನಕಲಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳನ್ನು ನಿರ್ವಹಿಸುತ್ತಿದ್ದು, ಅರ್ಜಿದಾರರನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ವಿಡಿಯೊಗಳು, ತಿರುಚಿದ ವಿಷಯ, ಸುಳ್ಳು ಆರೋಪಗಳು ಮತ್ತು ದಾರಿತಪ್ಪಿಸುವ ನಿರೂಪಣೆಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಹಿಂದಿನ ಖಾತೆಗಳನ್ನು ನಿರ್ಬಂಧಿಸಿದ ಅಥವಾ ತೆಗೆದುಹಾಕಿದ ಬಳಿಕವೂ ನಕಲಿ ಖಾತೆಗಳನ್ನು ಪದೇಪದೆ ಸೃಷ್ಟಿಸಿ, ವಿಷಯದ ಪ್ರಸರಣವನ್ನು ಮುಂದುವರಿಸಲು “ವ್ಯವಸ್ಥಿತ ಮತ್ತು ಸತತ ಪ್ರಯತ್ನ” ಮುಂದುವರಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಎಸ್. ರಾಜಶೇಖರ್ ಅವರು, ಕೋರ್ಟ್ ಪ್ರತಿಬಂಧಕಾದೇಶಗಳಿದ್ದರೂ ಪ್ರತಿವಾದಿಗಳು ಅವುಗಳನ್ನು ಉಲ್ಲಂಘಿಸಿ, ಅರ್ಜಿದಾರರ ವಿರುದ್ಧ ಮಾನಹಾನಿ ವಿಚಾರಗಳನ್ನು ಹಂಚಿಕೆ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ವಾರ್ತಾ ಭಾರತಿ ಪರ ವಕೀಲರು, ಯೂಟ್ಯೂಬ್ ಚಾನಲ್ಗಳನ್ನು ನಿರ್ಬಂಧಿಸುವಂಥ ಗಂಭೀರ ಥರದ ಮಧ್ಯಂತರ ಆದೇಶವನ್ನು ಅರ್ಜಿದಾರರು ಕೋರುತ್ತಿದ್ದಾರೆ. ಸಿವಿಲ್ ನ್ಯಾಯಾಲಯದ ಆದೇಶಗಳ ಜಾರಿಗಾಗಿ ಅಲ್ಲಿಯೇ ಮನವಿ ಮಾಡಲು ಅರ್ಜಿದಾರರಿಗೆ ಪರ್ಯಾಯ ಅವಕಾಶಗಳಿವೆ ಎಂದರು.
Related Articles
Thank you for your comment. It is awaiting moderation.



Comments (0)