ಸಾರಿಗೆ ನೌಕರರ ಮುಷ್ಕರಕ್ಕೆ ವಿಧಿಸಿದ್ದ ನಿರ್ಬಂಧ ಜೂ.2ರವರೆಗೆ ವಿಸ್ತರಿಸಿದ ಹೈಕೋರ್ಟ್; ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಲಹೆ
- by LegalSamachar
- May 21, 2026
- 3 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿದ್ದ ಮುಷ್ಕರವನ್ನು ನಿರ್ಬಂಧಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಜೂನ್ 2ರವರೆಗೆ ವಿಸ್ತರಿಸಿರುವ ಹೈಕೋರ್ಟ್, ರಾಜೀ ಸಂಧಾನದ ಮೂಲಕ ವೇತನ ಪರಿಷ್ಕರಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರ ಹಾಗೂ ಜಂಟಿ ಕ್ರಿಯಾ ಸಮಿತಿಗೆ ಮತ್ತೊಮ್ಮೆ ಸಲಹೆ ನೀಡಿದೆ.
ಮುಷ್ಕರ ಪ್ರಶ್ನಿಸಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿರುವ ಸಿ. ವೇದವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಡಾ. ಕೆ. ಮನ್ಮಥ ರಾವ್ ಅವರಿದ್ದ ರಜಾಲಾಲದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.
ಜಂಟಿ ಕ್ರಿಯಾ ಸಮಿತಿ ಕರೆದಿದ್ದ ಮುಷ್ಕರವನ್ನು ಆಕ್ಷೇಪಿಸಿ
ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ರಾಜೀ ಸಂಧಾನ ಪ್ರಕ್ರಿಯೆ ನಡೆಯುತ್ತಿದೆ. ಮೇ 25ರಂದು ಸಮಾಲೋಚನಾ ಸಭೆ ನಡೆಸಲಿದ್ದು, ಅಂದು ಸಾರಿಗೆ ನಿಗಮಗಳ 9 ಮಂದಿ ನಿರ್ದೇಶಕರು ಭಾಗವಹಿಸಲಿದ್ದಾರೆ. ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಲಾಗುತ್ತದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಸಂಧಾನ ಸಭೆಯಲ್ಲಿ ಜಂಟಿ ಕ್ರಿಯಾ ಸಮಿತಿಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪರ ವಕೀಲರು ತಿಳಿಸಿದ್ದಾರೆ. ಆದ್ದರಿಂದ, ಮುಷ್ಕರ ನಡೆಸಬಾರದು. ನೌಕರರ ಮತ್ತು ಸರ್ಕಾರದ ನಡುವಿನ ತಿಕ್ಕಾಟದಿಂದ ಜನ ಸಾಮಾನ್ಯರಿಗೆ ತೊಂದರೆಯಾಗಬಾರದು. ಮಾತುಕತೆ ಮೂಲಕವೇ ವೇತನ ಪರಿಷ್ಕರಣೆ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರಾನಾಥ್ ಪೂಜಾರಿ, ಸರ್ಕಾರ ಹೆಚ್ಚಳ ಮಾಡಿರುವ ಶೇ.12.5 ವೇತನ ಪ್ರಮಾಣವನ್ನು ಸಾರಿಗೆ ನಿಗಮಗಳ ಬಹುತೇಕ ಸಂಘಟನೆಗಳು ಒಪ್ಪಿಕೊಂಡಿವೆ. ಸರ್ಕಾರ ಈಗಾಗಲೇ 450 ಕೋಟಿ ರು. ಬಿಡುಗಡೆ ಸಹ ಮಾಡಿದೆ. ಈಗ ಮುಷ್ಕರಕ್ಕೆ ಕರೆ ಕೊಟ್ಟಿರುವ ಜಂಟಿ ಕ್ರಿಯಾ ಸಮಿತಿಯವರು ನಿವೃತ್ತ ಉದ್ಯೋಗಿಗಳು. ಅವರು ಕಾರ್ಮಿಕರನ್ನು ಪ್ರತಿನಿಧಿಸುವುದಿಲ್ಲ ಎಂದು ತಿಳಿಸಿದರು.
ಮುಂದುವರಿದು, ವೇತನ ಪರಿಷ್ಕರಣೆ ವಿಚಾರವಾಗಿ ರಾಜೀ ಸಂಧಾನ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಮಿಕ ಆಯುಕ್ತರ ಮುಂದೆ ಮೇ 25ಕ್ಕೆ ಸಭೆ ನಿಗದಿಯಾಗಿದೆ. ಅದರಲ್ಲಿ ಸಾರಿಗೆ ಇಲಾಖೆಯ 9 ನಿಗಮಗಳ ನಿರ್ದೇಶಕರು ಭಾಗವಹಿಸಲಿದ್ದಾರೆ. ಈ ವೇಳೆ ನೌಕರರ ಸಂಘಟನೆಗಳು ಭಾಗವಹಿಸಿ ಮಾತುಕತೆ ನಡೆಸಬೇಕು ಎಂದರು.
ಸಾರಿಗೆ ನೌಕರರ ಸಂಘಟನೆಗಳ ಪರ ವಕೀಲರು, ಸಾರಿಗೆ ಇಲಾಖೆಯ ಸಂಬಂಧಪಟ್ಟ 9 ನಿಗಮಗಳ ನಿರ್ದೇಶರು ರಾಜೀ ಸಂಧಾನ ಸಭೆಯಲ್ಲಿ ಭಾಗಿಯಾದರೆ, ಜಂಟಿ ಕ್ರಿಯಾ ಸಮಿತಿಯ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜೀ ಸಂಧಾನ ಮಾತುಕತೆ ನಡುವೆ ಮುಷ್ಕರ ನಡೆಸುವುದು ಸೂಕ್ತವಲ್ಲ. ಮುಷ್ಕರ ನಡೆಸಬಾರದು. ಮಾತುಕತೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಗಳು ನಡೆಯುತ್ತಿರುವ ವೇಳೆ ಮುಷ್ಕರ ಸರಿಯಲ್ಲ. ಅದರಿಂದ, ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳು ನಡುವಿನ ತಕ್ಕಾಟದಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂದು ನುಡಿಯಿತು.
ಅಂತಿಮವಾಗಿ, ಅರ್ಜಿಗಳ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿದ ನ್ಯಾಯಪೀಠ, ಮುಷ್ಕರಕ್ಕೆ ನಿರ್ಬಂಧ ಹೇರಿ ಮೇ 19ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
Related Articles
Thank you for your comment. It is awaiting moderation.



Comments (0)