ಬಂಟ್ವಾಳ ಯುವತಿ ಕೊಲೆ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿದವರ ವಿರುದ್ಧ ಕ್ರಿಮಿನಲ್ ಕೇಸ್; ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಕಿಡಿ

ಬೆಂಗಳೂರು: ಬಂಟ್ವಾಳ ಬಸ್ ನಿಲ್ದಾಣದಲ್ಲಿ ‌ನಡೆದಿದ್ದ ಯುವತಿಯ ಹತ್ಯೆ ವಿಚಾರವಾಗಿ ನ್ಯೂಸ್ ಪೋರ್ಟಲ್‌‌ನಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರವನ್ನು ಟೀಕಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರ‌ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರ ಕೊಲೆಗಾರರನ್ನು ಹಿಡಿಯದೆ, ಅವರ ಬಗ್ಗೆ ಬರೆದವರ ಮೇಲೆ‌ ಪ್ರಕರಣ ದಾಖಲಿಸುವುದೇ ಆಗಿದೆ ಎಂದು ಕಿಡಿಕಾರಿದೆ.

ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಮಂಗಳೂರಿನ ಕದ್ರಿ ನಿವಾಸಿ ಪ್ರದೀಪ್ ಸರಿಪಳ್ಳ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.‌ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು.

ಇದೇ ವೇಳೆ, ಅರ್ಜಿದಾರರ ವಿರುದ್ಧದ ಎಫ್ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಪ್ರತಿವಾದಿಗಳಾದ ಪಣಂಬೂರು ಠಾಣೆ ಪೊಲೀಸರು ಹಾಗೂ ದೂರುದಾರರಾದ ಮಂಗಳೂರು ನಿವಾಸಿ ಮೊಹಮ್ಮದ್ ಮುನೀಮ್ ಎಂಬುವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಬಂಟ್ವಾಳ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಕೊಲೆ‌ ಪ್ರಕರಣ ಸಂಬಂಧ ನ್ಯೂಸ್ ಪೋರ್ಟಲ್ ಒಂದು ಪ್ರಕಟಿಸಿದ್ದ ವ್ಯಂಗ್ಯಚಿತ್ರವನ್ನು ಟೀಕೆ ಮಾಡಿ‌ ಫೇಸ್‌ಬುಕ್ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2)ರ ಅಡಿ ಎಫ್ಐಆರ್ ದಾಖಲಿಸಲಾಗಿದೆ. ಆದರೆ, ನ್ಯೂಸ್ ಪೋರ್ಟಲ್ ಅನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆಗ ನ್ಯಾಯಪೀಠ, ನೀವು ಯಾರು ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು. ಪ್ರದೀಪ್ ಪರ ವಕೀಲರು, ಅರ್ಜಿದಾರರು ಸಾರ್ವಜನಿಕರಾಗಿದ್ದಾರೆ ಎಂದು ಉತ್ತರಿಸಿದರು.

ಆಗ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ಮೇಲೆ ಕೇಸ್ ದಾಖಲಿಸಿ, ನ್ಯೂಸ್ ಪೋರ್ಟಲ್ ಅನ್ನು ಕೈ ಬಿಡಲಾಗಿದೆಯೇ? ನೀವೇನು (ಸರ್ಕಾರ / ಪೊಲೀಸರು) ಕೊಲೆಗಾರರನ್ನು ಹಿಡಿಯದೇ ಅವರ ಬಗ್ಗೆ ಬರೆದವರ ಹಾಗೂ ನ್ಯೂಸ್ ಮಾಡಿದವರ ಮೇಲೆ ಪ್ರಕರಣ ದಾಖಲಿಸುವುದೇ ಆಯ್ತು ಎಂದು ಕಿಡಿ ಕಾರಿತಲ್ಲದೆ, ಅರ್ಜಿದಾರರ ವಿರುದ್ಧದ ಎಫ್ಐಆರ್‌ಗೆ ತಡೆಯಾಜ್ಞೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?
ದೂರುದಾರ ಮೊಹಮ್ಮದ್ ಮುನೀಮ್ ಜುಲೈ 19ರಂದು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ಫೇಸ್ಟುಕ್ ಖಾತೆ ವೀಕ್ಷಿಸುತ್ತಿದ್ದಾಗ “ಪ್ರದೀಪ ಸರಿಪಳ್ಳ” ಎಂಬ ಖಾತೆಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದೊಂದಿಗೆ “ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾಳನ್ನು ಕೊಂದವನ ಮತ ಯಾವುದು? ಕೇರಳದ ಸವರಿಯಾ ವಸಂತಳನ್ನು ಕೊಂದವನ ಮತ ಯಾವುದು? ಮುಂಬೈನಲ್ಲಿ ಶ್ರದ್ಧಾಳನ್ನು ಭೀಕರವಾಗಿ ಕತ್ತರಿಸಿ ಫ್ರಿಡ್ಜಲ್ಲಿ ಇಟ್ಟವನ ಮತ ಯಾವುದು?” ಎಂಬ ಬರಹವಿರುವ ಪೋಸ್ಟ್ ಪ್ರಕಟಿಸಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು, ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ, ವೈಷಮ್ಯ ಸೃಷ್ಟಿಸಿ ಹಾಗೂ ಕೋಮು ಉದ್ವಿಗ್ನತೆ ಉಂಟುಮಾಡಿ ಸಾರ್ವಜನಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ಈ ಪೋಸ್ಟ್ ಪ್ರಕಟಿಸಲಾಗಿದೆ ಎಂದು ಆರೋಪಿಸಿದ್ದರು.

ಈ ದೂರು ಆಧರಿಸಿ‌ ಪೊಲೀಸರು ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2)ರ (ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಾರ್ವಜನಿಕವಾಗಿ ಆತಂಕ, ಭಯ ಅಥವಾ ದ್ವೇಷವನ್ನು ಹರಡುವ ಸುಳ್ಳು ಮಾಹಿತಿ, ವದಂತಿಗಳು ಅಥವಾ ಹೇಳಿಕೆ ನೀಡಿದ, ಧರ್ಮ, ಜಾತಿ, ಭಾಷೆ ಅಥವಾ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡಿದ) ಅಡಿಯ ಅಪರಾಧ ಸಂಬಂಧ ಎಫ್ಐಆರ್ ದಾಖಲಿಸಿದ್ದರು. ಇದರಿಂದ, ಪ್ರಕರಣ ರದ್ದು ಕೋರಿ ಪ್ರದೀಪ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Articles

Comments (0)

Leave a Comment