ಬಳ್ಳಾರಿ ಪಾಲಿಕೆ ಕಾಮಗಾರಿ ಅಕ್ರಮ ಆರೋಪದ ಎಫ್‌ಐಆರ್ ರದ್ದು; ಪೂರ್ವಾನುಮತಿ ಬಳಿಕ ಕ್ರಮ ಜರುಗಿಸಲು ಹೈಕೋರ್ಟ್ ಆದೇಶ

ಬೆಂಗಳೂರು/ಧಾರವಾಡ: ಬಳ್ಳಾರಿ ಮಹಾನಗರ ಪಾಲಿಕೆಯ ಕಾಮಗಾರಿಗಳಲ್ಲಿ ಸುಮಾರು 1.55 ಕೋಟಿ ರೂ. ದುರ್ಬಳಕೆ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಮತ್ತು ಆ ಕುರಿತ ತನಿಖೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಇದೇ ವೇಳೆ, ಈ ಆದೇಶವು ಪ್ರಕರಣಕ್ಕೆ ಸಂಪೂರ್ಣ ತೆರೆ ಎಳೆದಂತಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷ ನ್‌ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪೂರ್ವಾನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಗೆ ಸೂಚಿಸಿದೆ.

ಎಫ್‌ಐಆರ್ ರದ್ದು ಕೋರಿ ವೀರೇಶ ಸವದಿ, ಜಿ.ಪ್ರಶಾಂತ ನಾಯ್ಕ, ನಿವೃತ್ತ ಪಾಲಿಕೆ ಆಯುಕ್ತ ಮಂಜುನಾಥ ಕರಬಸಪ್ಪ ನಲವಡಿ, ಎಂ. ತಿಮ್ಮಪ್ಪ ಮತ್ತು ಕಿರಿಯ ಇಂಜಿನಿಯರ್‌ ಆದರ್ಶ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದೆ.

ಸಾರ್ವಜನಿಕ ಸೇವಕರು ಕೈಗೊಂಡ ಅಧಿಕೃತ ನಿರ್ಧಾರ ಅಥವಾ ಶಿಫಾರಸುಗಳ ಕುರಿತು 2018ರ ಜುಲೈ 26ರ ನಂತರ ತನಿಖೆ ಆರಂಭಿಸುವುದಾದರೆ, ಆ ನಿರ್ಧಾರಗಳು ಅದಕ್ಕೂ ಹಿಂದಿನದ್ದಾಗಿದ್ದರೂ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದಿರುವ ನ್ಯಾಯಾಲಯ, ಸೆಕ್ಷನ್‌ 17ಎ ತನಿಖೆಯ ವಿಧಾನಕ್ಕೆ ಸಂಬಂಧಿಸಿದ ಪ್ರಕ್ರಿಯಾತ್ಮಕ ನಿಯಮವಾಗಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ದುರುದ್ದೇಶಪೂರಿತ ಹಾಗೂ ಅನಗತ್ಯ ಕ್ರಿಮಿನಲ್‌ ಪ್ರಕರಣಗಳಿಂದ ರಕ್ಷಿಸುವುದು ಇದರ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಪ್ರಕರಣ ದಾಖಲಿಸಲು ಎಂಟರಿಂದ ಹತ್ತು ವರ್ಷ ವಿಳಂಬವಾಗಿದೆ ಎಂಬ ಕಾರಣಕ್ಕೆ ದೂರನ್ನು ರದ್ದುಪಡಿಸಲು ನಿರಾಕರಿಸಿರುವ ನ್ಯಾಯಪೀಠ, ಭ್ರಷ್ಟಾಚಾರ, ಸಾರ್ವಜನಿಕ ಹಣದ ದುರ್ಬಳಕೆ ಮತ್ತು ಅಧಿಕಾರಿಗಳಿಂದ ನಂಬಿಕೆ ದ್ರೋಹದಂತಹ ಪ್ರಕರಣಗಳಲ್ಲಿ; ಅದರಲ್ಲೂ ಆರೋಪಗಳು ಸಾರ್ವಜನಿಕ ದಾಖಲೆಗಳಿಂದ ದೃಢಪಡಬಹುದಾದ ಸಂದರ್ಭಗಳಲ್ಲಿ, ವಿಳಂಬದ ಕಾರಣಕ್ಕೆ ಪ್ರಕರಣ ರದ್ದುಪಡಿಸುವಾಗ ನ್ಯಾಯಾಲಯಗಳು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

ಪೂರ್ವಾನುಮತಿ ಇಲ್ಲದ ಕಾರಣ ಸದ್ಯದ ತನಿಖೆಯನ್ನು ರದ್ದುಪಡಿಸಿರುವ ನ್ಯಾಯಾಲಯ, ತನಿಖಾಧಿಕಾರಿಯು ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಹಾಗೂ ಪ್ರಾಧಿಕಾರವು ಅವುಗಳನ್ನು ಪರಿಶೀಲಿಸಿ ಕಾರಣಸಹಿತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿದೆ. ಜತೆಗೆ, ಕಾಯ್ದೆಯಲ್ಲಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದೂ ಹೇಳಿದೆ.

ಪ್ರಕರಣವೇನು?
ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ 2012ರಿಂದ 2017ರ ಅವಧಿಯಲ್ಲಿ ವಿವಿಧ ನಿರ್ಮಾಣ ಕಾಮಗಾರಿಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಲೋಕಾಯುಕ್ತ ಡಿವೈಎಸ್‌ಪಿ 2024ರ ಸೆಪ್ಟೆಂಬರ್ 23ರಂದು ದೂರು ಸಲ್ಲಿಸಿದ್ದರು. ಅದರ ಆಧಾರದ ಮೇಲೆ 2024ರ ಅಕ್ಟೋಬರ್ 3ರಂದು ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

ದೂರಿನಲ್ಲಿ ನಾಲ್ಕು ಪ್ಯಾಕೇಜ್‌ಗಳಿಗೆ ಸಂಬಂಧಿಸಿದ 17 ಕಾಮಗಾರಿ ಆದೇಶಗಳನ್ನು ಉಲ್ಲೇಖಿಸಲಾಗಿತ್ತು. ಮೊದಲ ಪ್ಯಾಕೇಜ್‌ನಲ್ಲಿ 36.85 ಲಕ್ಷ ರೂ, ಎರಡನೇ ಪ್ಯಾಕೇಜ್‌ನಲ್ಲಿ 41.09 ಲಕ್ಷ ರೂ, ಮೂರನೇ ಪ್ಯಾಕೇಜ್‌ನಲ್ಲಿ 32.42 ಲಕ್ಷ ರೂ. ಹಾಗೂ ನಾಲ್ಕನೇ ಪ್ಯಾಕೇಜ್‌ನಲ್ಲಿ 45.26 ಲಕ್ಷ ರೂ. ಸೇರಿ ಒಟ್ಟು 1.55 ಕೋಟಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಎಫ್‌ಐಆರ್ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಉಲ್ಲೇಖಿಸಲಾದ ಕಾಮಗಾರಿಗಳು 2012ರಿಂದ 2017ರ ಅವಧಿಗೆ ಸಂಬಂಧಿಸಿದ್ದವು. ಆದರೆ, 2018ರ ಜುಲೈ 26ರಿಂದ ಜಾರಿಗೆ ಬಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ಪಡೆಯದೆ 2024ರಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ವಾದಿಸಿದ್ದರು.

Related Articles

Comments (0)

Leave a Comment