ಅಕ್ರಮ ಹಣ ವರ್ಗಾವಣೆ; ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇಲವಾಲ್‌ಗೆ ಹೈಕೋರ್ಟ್ ಜಾಮೀನು

ಬೆಂಗಳೂರು: ಬಿಟ್‌ ಕಾಯಿನ್‌ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಹ್ಯಾಕರ್ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಮತ್ತು ಕ್ರಿಪ್ಟೊ ಟ್ರೇಡರ್ ರಾಬಿನ್‌ ಖಂಡೇಲವಾಲ್‌‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಮೇ 8ರಂದು ಬಂಧನಕ್ಕೊಳಗಾಗಿದ್ದ ಶ್ರೀಕಿ ಹಾಗೂ ಕ್ರಿಪ್ಟೊ ಟ್ರೇಡರ್‌ ರಾಬಿನ್‌ ಖಂಡೇಲವಾಲ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಪುರಸ್ಕರಿಸಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, 5 ವರ್ಷಗಳ ಹಿಂದಿನ ಪ್ರಕರಣದಲ್ಲಿ ತನಿಖೆ ಮುಗಿಯುವ ಕೊನೆಯ ಹಂತದಲ್ಲಿ ಅರ್ಜಿದಾರರನ್ನು ಬಂಧಿಸಲಾಗಿದೆ. ಅವರ ಬಳಿ ಬಿಟ್‌ ಕಾಯಿನ್‌ ಅಥವಾ ಅದರಿಂದ ಸಂಗ್ರಹಿಸಿರುವ ಬೇರಾವುದೇ ಹಣವಿದ್ದರೆ ಇಲ್ಲಿಯವರೆಗೆ ಇಟ್ಟುಕೊಳ್ಳುತ್ತಿದ್ದರೇ ಎಂದು ಜಾರಿ ನಿರ್ದೇಶನಾಲಯವನ್ನು (ಇ.ಡಿ) ಪ್ರಶ್ನಿಸಿತು.

ಸಾಕ್ಷ್ಯ ವಿಚಾರಣೆ ನಡೆಯುವವರೆಗೆ ಅರ್ಜಿದಾರಿಗೆ ಜಾಮೀನು ಮಂಜೂರು ಮಾಡಬಾರದು. ಅರ್ಜಿದಾರರು ಹ್ಯಾಕಿಂಗ್‌ ಅನ್ನು ಉದ್ಯಮ ಮಾಡಿಕೊಂಡು ಅದರಿಂದ ಸಂಗ್ರಹಿಸಿದ ಹಣದಿಂದ ಐಷಾರಾಮಿ ಜೀವನ ನಡೆಸಿದ್ದಾರೆ ಎಂಬ ಇ.ಡಿ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್.ರಾವ್‌ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

ಅರ್ಜಿದಾರರಿಂದ ಏನನ್ನೂ ಜಪ್ತಿ ಮಾಡಲಾಗಿಲ್ಲ. ಇ.ಡಿ ಸಮನ್ಸ್‌ ನೀಡಿದಾಗಲೆಲ್ಲ ಅರ್ಜಿದಾರರು ವಿಚಾರಣೆಗೆ ಹಾಜರಾಗಿ, ಸಹಕರಿಸಿದ್ದಾರೆ. ಇ.ಡಿ ದೂರಿನ ಭಾಗವಾಗಿ ಇನ್ನೂ ಸಕ್ಷಮ ನ್ಯಾಯಾಲಯ ಸಂಜ್ಞೇ ಪರಿಗಣಿಸಿಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂಬ ಅರ್ಜಿದಾರರ ಪರ ಹಿರಿಯ ವಕೀಲರಾದ ಸಂದೇಶ ಚೌಟ ಮತ್ತು ವಕೀಲ ಬಿಪಿನ್‌ ಹೆಗಡೆ ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.

ಪ್ರಕರಣವೇನು?
ಗೇಮಿಂಗ್‌ ವೇದಿಕೆ ಮತ್ತು ವಾಲೆಟ್‌ಗಳನ್ನು ಹ್ಯಾಕ್‌ ಮಾಡಿ ಅದರ ಹಣವನ್ನು ಕ್ರಿಪ್ಟೊಕರೆನ್ಸಿ ಖರೀದಿಸಿ, ವರ್ಗಾವಣೆ ಮಾಡಲಾಗಿದೆ. ಇದನ್ನು ಬಳಸಿ ಡಾರ್ಕ್‌ವೆಬ್‌ ಮೂಲಕ ಮಾದಕ ದ್ರವ್ಯಗಳ ಖರೀದಿಸುವುಲ್ಲದೇ ಆರೋಪಿಗಳು ಐಷಾರಾಮಿ ಜೀವನ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರೆಡಿಕೇಟ್‌ ಅಪರಾಧದಲ್ಲಿ ಶ್ರೀಕಿ, ರಾಬಿನ್‌, ಪ್ರತೀಕ್‌, ಸುನೀಶ್‌ ಹೆಗಡೆ ಸೇರಿದಂತೆ ಆರು ಮಂದಿಯನ್ನು ಇ.ಡಿ ಬಂಧಿಸಿತ್ತು. ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌) ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ.

Related Articles

Comments (0)

Leave a Comment