ಸಿನಿಮಾ ಟಿಕೆಟ್ ದರದ ಮೇಲೆ ಶೇ. 2 ಸೆಸ್ ವಿಧಿಸುವ ವಿಚಾರದಲ್ಲಿ ಆತುರದ ಕ್ರಮವಿಲ್ಲ; ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಬೆಂಗಳೂರು: ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರದ ಮೇಲೆ ಶೇ. 2 ಸೆಸ್ (ಉಪಕರ) ಸಂಗ್ರಹಿಸುವ ವಿಚಾರದಲ್ಲಿ ಅರ್ಜಿದಾರರ ವಿರುದ್ಧ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯ್ದೆ, ಅದಕ್ಕೆ ತರಲಾಗಿರುವ ತಿದ್ದುಪಡಿ ಹಾಗೂ ಅದರ ಅಡಿ ರೂಪಿಸಿರುವ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ), ಪಿವಿಆರ್ ಐನಾಕ್ಸ್ ಹಾಗೂ ಬೆಂಗಳೂರಿನ ವಿನಾಯಕ ಚಿತ್ರಮಂದಿರದ ಮಾಲೀಕರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆಯ ಆರಂಭದಲ್ಲಿ ನ್ಯಾಯಪೀಠ, ಕಾಯ್ದೆಯ ಸೆಕ್ಷನ್‌ 9ರ ಪ್ರಕಾರ ಮಾಸಿಕವಾಗಿ ಪ್ರತಿ ತಿಂಗಳು ಅರ್ಜಿದಾರರು ಅನುಪಾಲನೆ (ಸೆಸ್‌ ಸಂಗ್ರಹಿಸಿದ ವರದಿ) ಮಾಡಬೇಕು ಎಂದಿದೆ. ಈಗ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿರುವುದರಿಂದ ಅರ್ಜಿ ನಿರ್ಧಾರವಾಗುವವರೆಗೆ ಆತುರದ ಕ್ರಮಕೈಗೊಳ್ಳಬಾರದು ಎಂದು ಹೇಳಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ (ಎಎಜಿ) ಭಾನುಪ್ರಕಾಶ್‌ ಅವರು, ಇಂದಿನಿಂದ (ಸೆಪ್ಟೆಂಬರ್ 30) ಕಾಯ್ದೆ ಜಾರಿಗೆ ಬಂದಿದೆ. ಶೇ. 2 ಸೆಸ್ ವಿಧಿಸುವ ಅಧಿಸೂಚನೆಯನ್ನು ಹಿಂಪಡೆಯಲಾಗುವುದು. ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದರು.

ವಿನಾಯಕ ಚಿತ್ರಮಂದಿರದ ಪರ ವಕೀಲ ಕೆ.ವಿ. ಧನಂಜಯ ಅವರು, ಕಾಯ್ದೆಯಲ್ಲಿ ಸೆಸ್‌ ಸಂಗ್ರಹಿಸಬೇಕು ಎಂದು ಎಲ್ಲೂ ಹೇಳಿಲ್ಲ. ಕಾಯ್ದೆ ಇಂದು ಜಾರಿಗೆ ಬಂದಿರುವುದರಿಂದ ಮುಂದಿನ ತಿಂಗಳಿಂದ ಅರ್ಜಿದಾರರು ಬ್ಯಾಂಕ್‌ ಸ್ಟೇಟ್‌ಮೆಂಟ್‌ ಸಲ್ಲಿಸಬೇಕಾಗುತ್ತದೆ. ಕಾಯ್ದೆ ಅಡಿ ನೋಂದಣಿ ಮಾಡಲು ನಿರ್ದಿಷ್ಟ ಫಾರ್ಮ್‌ ಸಹ ಇಲ್ಲ. ಆದ್ದರಿಂದ, ಕಾಯ್ದೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಈ ಹಂತದಲ್ಲಿ ಎಎಜಿ ಅವರು, ಮೂರ್ನಾಲ್ಕು ದಿನ ಕಾಲಾವಕಾಶ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು. ವಾದ-ಪ್ರತಿವಾದ ಆಲಿಸಿ ನ್ಯಾಯಾಲಯ ನಿರ್ಧರಿಸಬಹುದು. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಆದ್ದರಿಂದ, ಕಾಯ್ದೆಗೆ ತಡೆ ನೀಡಬಾರದು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಎಜಿಯವರು ಅರ್ಜಿದಾರರ ವಿರುದ್ಧ ಆತುರದ ಕ್ರಮಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ದಾಖಲಿಸಿ ವಿಚಾರಣೆಯನ್ನು ಅಕ್ಟೋಬರ್‌ 26ಕ್ಕೆ ಮುಂದೂಡಿತು.

Related Articles

Comments (0)

Leave a Comment