ಮಹಿಳಾ ಸಿಬ್ಬಂದಿಗೆ ವೇತನಸಹಿತ ಮುಟ್ಟಿನ ರಜೆ; ಸರ್ಕಾರದ ಅಧಿಸೂಚನೆ ಪ್ರಶ್ನಿಸಿದ ಅರ್ಜಿಗಳ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
- by LegalSamachar
- September 17, 2026
- 11 Views
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಲಾದ ಅರ್ಜಿಗಳ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಋತುಚಕ್ರ ರಜೆ ಸಂಬಂಧ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಕುರಿತು ಗುರುವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಆರೋಗ್ಯದ ವಿಷಯವು ಸಂವಿಧಾನದ ಸಮವರ್ತಿ ಪಟ್ಟಿ (ಕನ್ಕರೆಂಟ್ ಲಿಸ್ಟ್) ಅಡಿ ಬರುತ್ತದೆ. ಅದರಂತೆ ಸಂವಿಧಾನದ ಪರಿಚ್ಛೇದ 162ರ ಪ್ರಕಾರ ರಾಜ್ಯ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳುವ ಅಧಿಕಾರವಿರಲಿದೆ. ಈ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮುಂದುವರಿದು, ತಜ್ಜರ ಸಮಿತಿಯ ವರದಿ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಜರ ಸಮಿತಿಯು ಅರ್ಜಿದಾರರ ಅಹವಾಲು, ಆಕ್ಷೇಪ, ಸಲಹೆಗಳನ್ನು ಆಲಿಸಿದೆ. ಕಾನೂನು ಆಯೋಗ ಸಹ ಇದರ ಶಿಫಾರಸು ಮಾಡಿತ್ತು. ಇವೆಲ್ಲದರ ಮಿಗಿಲಾಗಿ ಮಹಿಳೆಯರ ಆರೋಗ್ಯ ಮತ್ತು ಘನತೆಯ ದೃಷ್ಟಿಯಿಂದ ಋತುಚಕ್ರ ರಜೆ ನೀತಿ ಜಾರಿಗೆ ತರಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಅರ್ಜಿದಾರರ ಆಕ್ಷೇಪವೇನು?
ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ರಾಜ್ಯ ಸರ್ಕಾರ ಸೀಮಿತ ಸಂದರ್ಭಗಳಲ್ಲಿ ತೀರ್ಮಾನ ಕೈಗೊಳ್ಳಬಹುದು. ಆದರೆ, ಅದಕ್ಕೆ ಸ್ವತಂತ್ರ ಮತ್ತು ವ್ಯಾಪಕ ಅಧಿಕಾರ ಇರುವುದಿಲ್ಲ. ರಾಜ್ಯಪಾಲರ ಅನುಮೋದನೆ ಅಗತ್ಯವಾಗಿದೆ. ರಾಜ್ಯ ಸರ್ಕಾರದ ಆದೇಶವು ಸಂವಿಧಾನದ ಪರಿಚ್ಛೇದ 14ರ ಅಡಿಯ ಸಮಾನತೆ ಹಕ್ಕಿಗೆ ವಿರುದ್ಧವಾಗಿದ್ದು, ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವುದು ಅರ್ಜಿದಾರರ ಆಕ್ಷೇಪವಾಗಿದೆ.
ಸರ್ಕಾರದ ಆದೇಶವು ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ. ಇದರಿಂದ, ಮಹಿಳಾ ಉದ್ಯೋಗಿಗಳ ನೇಮಕಾತಿ ಹಾಗೂ ಬಡ್ತಿಗೆ ಕಂಪನಿಗಳು ಹಿಂದೇಟು ಹಾಕುತ್ತವೆ. ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ಕಡ್ಡಾಯ ರಜೆ ನೀಡುವುದರಿಂದ ಸ್ಪರ್ಧಾತ್ಮಕ ವೃತ್ತಿ ಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ. ಮಹಿಳಾ ಉದ್ಯೋಗಿಗಳ ದಕ್ಷತೆ ಕಡಿಮೆ ಮಾಡುತ್ತದೆ. ಮಹಿಳಾ ನೌಕರರ ಸಬಲೀಕರಣಕ್ಕೂ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
Related Articles
Thank you for your comment. It is awaiting moderation.


Comments (0)