- ಟ್ರಯಲ್ ಕೋರ್ಟ್
- Like this post: 9
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೂಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ಕೋರ್ಟ್
- by LegalSamachar
- August 25, 2026
- 8 Views
ಬೆಂಗಳೂರು: ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಹ ಆರೋಪಿಯಾದ ಪ್ರದೂಷ್ ರಾವ್ಗೆ (ಎ14) ಕ್ಷಮಾದಾನ ನೀಡಿ ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ನಗರದ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 307ರ ಅಡಿ ಅಪ್ರೂವರ್/ಮಾಫಿ ಸಾಕ್ಷಿಯಾಗಿ ಪರಿಗಣಿಸಿ, ಕ್ಷಮೆ ನೀಡಿ ಬಿಡುಗಡೆ ಮಾಡುವಂತೆ ಕೋರಿ ಪ್ರದೂಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಮಂಗಳವಾರ ಪುರಸ್ಕರಿಸಿದ್ದಾರೆ.
ಇದೇ ವೇಳೆ, ಪ್ರದೂಷ್ ರಾವ್ಗೆ ಕ್ಷಮಾದಾನ ನೀಡಲು ಮತ್ತು ಆತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಕೆಲ ಷರತ್ತುಗಳನ್ನೂ ವಿಧಿಸಿದೆ.
ಸಾಕ್ಷಿಯಾಗಿ ವಿಚಾರಣೆ ನಡೆಸುವ ಸಮಯದಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೂಷ್ ತನಗೆ ತಿಳಿದಿರುವ ನಿಜ ಸಂಗತಿ, ಸಂದರ್ಭ-ಸನ್ನಿವೇಶವನ್ನು ನ್ಯಾಯಾಲಯದ ಮುಂದೆ ಸಂಪೂರ್ಣವಾಗಿ ಬಹಿರಂಗಪಡಿಸಬೇಕು. ಪ್ರಕರಣದ ವಿಚಾರಣೆ ಮುಕ್ತಾಯವಾಗುವವರೆಗೂ ಬಂಧನದಲ್ಲಿರಬೇಕು. ಉದ್ದೇಶಪೂರ್ವಕವಾಗಿ ಅಗತ್ಯ ಮಾಹಿತಿಯನ್ನು ಮರೆಮಾಚಿದರೆ, ಯಾವುದೇ ಸುಳ್ಳು ಸಾಕ್ಷ್ಯ ನೀಡಿದರೆ ಅಥವಾ ನ್ಯಾಯಾಲಯ ವಿಧಿಸಿರುವ ಷರತ್ತು ಪಾಲಿಸಲು ವಿಫಲವಾದರೆ ಮತ್ತೆ ಆರೋಪಿಯಾಗಿಯೇ ಪರಿಗಣಿಸಲಾಗುತ್ತದೆ. ನಂತರ, ಈಗಾಗಲೇ ಆರೋಪಿಸಲಾಗಿರುವ ಅಪರಾಧಗಳ ಜತೆಗೆ ಸುಳ್ಳು ಸಾಕ್ಷ್ಯ ನೀಡಿದ ಅಪರಾಧ ಮೇಲೆ ಕಾನೂನು ಪ್ರಕಾರ ವಿಚಾರಣೆ ನಡೆಸಲಾಗುವುದು ಎಂಬ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ.
ಹಿನ್ನೆಲೆ:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳ ತನಿಖೆ) ಪರ ನಾನು ಸಾಕ್ಷ್ಯ ನುಡಿಯುತ್ತೇನೆ. ಪ್ರಕರಣದ ಎಲ್ಲ ಸತ್ಯಾಂಶಗಳು ಹಾಗೂ ಉಳಿದ ಆರೋಪಿಗಳ ಪಾತ್ರವನ್ನು ವಿವರಿಸುತ್ತೇನೆ. ಆದ್ದರಿಂದ, ಪ್ರಕರಣದಲ್ಲಿ ನನಗೆ ಕ್ಷಮಾದಾನ ನೀಡಬೇಕು. ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ 2026ರ ಆಗಸ್ಟ 7ರಂದು ಪ್ರದೂಷ್ ರಾವ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
ಈ ಅರ್ಜಿ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಸ್ವಯಂಪ್ರೇರಿತವಾಗಿ ಈ ಅರ್ಜಿ ಸಲ್ಲಿಸಲಾಗಿದೆಯೇ? ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳು ತಿಳಿದಿದೆಯೇ? ಪ್ರಕರಣಕ್ಕೆ ಸಂಬಂಧಿಸಿದಂತೆ ತಿಳಿದಿರುವ ಸತ್ಯ ಸಂಗತಿಗಳು ಬಹಿರಂಗಪಡಿಸಲು ಸಿದ್ಧವೇ ಎಂದು ಆರೋಪಿಯನ್ನು ಪ್ರಶ್ನಿಸಿತ್ತು. ಈ ಎಲ್ಲಾ ಪ್ರಶ್ನೆಗಳಿಗೂ ಹೌದು ಎಂದು ಉತ್ತರಿಸಿದ್ದ ಪ್ರದೂಷ್, ಪ್ರಕರಣದಲ್ಲಿ ನನಗೆ ತಿಳಿದಿರುವ ಸತ್ಯಾಂಶ ಹಾಗೂ ಇತರ ಆರೋಪಿಗಳ ಪಾತ್ರವನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದರು. ನಂತರ ನ್ಯಾಯಾಲಯ ಅರ್ಜಿ ಸಲ್ಲಿಕೆ ಕುರಿತು ಜೈಲಿನಲ್ಲಿರುವ ಪ್ರದೂಷ್ನೊಂದಿಗೆ ಸಮಾಲೋಚಿಸಿ ವರದಿ ಸಲ್ಲಿಸಲು ಪ್ರೊಬೇಷನ್ ಅಧಿಕಾರಿಯನ್ನು ಸಹ ನೇಮಿಸಿತ್ತು. ಇದೀಗ ನ್ಯಾಯಾಲಯ ಪ್ರದೂಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಆದೇಶಿಸಿದೆ.
Related Articles
Thank you for your comment. It is awaiting moderation.


Comments (0)