ಎಸ್‌ಸಿ ಒಳಮೀಸಲಾತಿ ವರ್ಗೀಕರಣ; ಸಚಿವ ಸಂಪುಟದ ನಿರ್ಣಯ ಪ್ರಶ್ನಿಸಿದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by LegalSamachar
- August 5, 2026
- 13 Views
ಬೆಂಗಳೂರು: ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್. ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಜತೆಗೆ, ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಮತ್ತೊಂದು ಅರ್ಜಿಯಲ್ಲಿ ‘ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಬಹುದು. ಆದರೆ, ಅಂತಿಮ ನೇಮಕಾತಿ ಆದೇಶಗಳ್ನು ನೀಡುವಂತಿಲ್ಲ’ ಎಂದು 2025ರ ಅಕ್ಟೋಬರ್ 16ರಂದು ಹೊರಡಿಸಲಾಗಿರುವ ಮಧ್ಯಂತರ ತಡೆ ಆದೇಶ ಈಗ ಸಲ್ಲಿಕೆಯಾಗಿರುವ ಅರ್ಜಿಗೂ ಅನ್ವಯವಾಗಲಿದೆ ಎಂದು ನ್ಯಾಯಪೀಠ ಹೇಳಿದೆ.
ಸಚಿವ ಸಂಪುಟದ ನಿರ್ಣಯ ಪ್ರಶ್ನಿಸಿ ಜುಡೊ ಬಂಜಾರ ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿ ಖೇಮ್ ಸಿಂಗ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಮತ್ತೊಂದು ಅರ್ಜಿಯಲ್ಲಿ ಈ ಹಿಂದೆ ನೀಡಲಾಗಿರುವ ಮಧ್ಯಂತರ ತಡೆ ಆದೇಶ ಹಾಲಿ ಅರ್ಜಿಗೂ ಅನ್ವವಾಗಲಿದೆ ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ:
ಕೊರಮ, ಕೊರಚ, ಬಂಜಾರ ಸೇರಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದಲ್ಲಿನ 63 ಜಾತಿಗಳ ಪೈಕಿ ಅತೀ ಹಿಂದುಳಿದ 59 ಜಾತಿಗಳಿಗೆ ಶೇ. 20 ಮೀಸಲಾತಿ ಹಾಗೂ ನಾಲ್ಕು ಜಾತಿಗಳಿಗೆ ಶೇ. 80 ಮೀಸಲಾತಿ ನಿಗದಿಪಡಿಸಲಾಗಿದೆ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧ ಹಾಗೂ ಸಂವಿಧಾನಬಾಹಿರವಾಗಲಿದೆ. ಮೇಲಾಗಿ, ಮೀಸಲಾತಿ ನಿಗದಿ, ಹೆಚ್ಚಳ, ಮೀಸಲಾತಿ ಪಟ್ಟಿಗೆ ಸೇರಿಸುವುದು ರಾಷ್ಟ್ರಪತಿಗೆ ಪ್ರದತ್ತವಾದ ಅಧಿಕಾರವಾಗಿದ್ದು, ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಿಲ್ಲ. ಆದ್ದರಿಂದ, ಸಚಿವ ಸಂಪುಟದ ನಿರ್ಣಯ ಹಾಗೂ ಅದರ ನಂತರ ಸರ್ಕಾರ ಹೊರಡಿಸಿರುವ ಅಧಿಸೂಚನೆಗಳನ್ನು ರದ್ದುಪಡಿಸಬೇಕು. 2022ರ ಡಿಸೆಂಬರ್ 28ರ ಮೊದಲು ಚಾಲ್ತಿಯಲ್ಲಿರುವ ನಿಮಯಗಳನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)