ಜಿಬಿಎ ವಾರ್ಡ್‌ಗಳ ಪರ್ಯಾಯ ಎಸ್‌ಐಆರ್‌ ಸದ್ಯ ಅಮಾನತಿನಲ್ಲಿಡಲಾಗಿದೆ; ಹೈಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗದ ಮಾಹಿತಿ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೆಲ ವಾರ್ಡ್‌ಗಳಿಗೆ ಪರ್ಯಾಯ ಎಸ್ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ನಡೆಸುವುದನ್ನು ಸದ್ಯಕ್ಕೆ ಅಮಾನತಿನಲ್ಲಿಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.

ದೇಶದಾದ್ಯಂತ ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಎಸ್ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಬೆಂಗಳೂರಿನ ಕೆಲ ವಾರ್ಡ್‌ಗಳಿಗೆ ಪ್ರತ್ಯೇಕ ಹಾಗೂ ಸಮಾನಾಂತರ ಎಸ್ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗ ಜೂನ್‌ 19ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಬೆಂಗಳೂರಿನ ವಿವೇಕ್ ಸೇರಿ ಐದು ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು, ಭಾರತೀಯ ಚುನಾವಣಾ ಆಯೋಗದಿಂದ ಎಸ್‌ಐಆರ್‌ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಬಿಎಗೆ ಎಸ್‌ಐಆರ್‌ ನಡೆಸುವುದನ್ನು ಅಮಾನತಿನಲ್ಲಿಡಲಾಗಿದೆ. ಈ ಸಂಬಂಧ ಮೆಮೊ ಸಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಎಸ್‌ಐಆರ್‌ ಮುಗಿದ ಮೇಲೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ ಎಂದರು.

ಅಂತಿಮವಾಗಿ ನ್ಯಾಯಪೀಠ, ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂಧ್ರ ಅವರು ಮೆಮೊ ಸಲ್ಲಿಸಿದ್ದು, ಸಂಸದರು/ಶಾಸಕರ ಕ್ಷೇತ್ರಗಳಲ್ಲಿ ಎಸ್‌ಐಆರ್‌ ನಡೆಯುತ್ತಿರುವುದರಿಂದ ಜಿಬಿಎಗೆ ಪ್ರತ್ಯೇಕ ಎಸ್‌ಐಆರ್‌ ನಡೆಸುವುದನ್ನು ಅಮಾನತಿನಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 28ಕ್ಕೆ ಮುಂದೂಡಿತು.

Related Articles

Comments (0)

Leave a Comment