ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಹೊಂದಿದ ಆರೋಪ; ನಟ ಪ್ರಕಾಶ್‌ ರಾಜ್‌ಗೆ ಜಾಮೀನು ಮಂಜೂರು

ಬೆಂಗಳೂರು: ಮೂರು ರಾಜ್ಯಗಳಲ್ಲಿ‌‌ ಒಂದೇ ಹೆಸರಿನ ನಾಲ್ಕು‌‌ ಪ್ರತ್ಯೇಕ ಮತದಾರರ ಗುರುತಿನ ಚೀಟಿ ಹೊಂದಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಪ್ರಕಾಶ್​ರಾಜ್‌ಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ‌ಪ್ರಕಾಶ್‌ರಾಜ್ ವಿರುದ್ಧ ಬೆಂಗಳೂರಿನ 48ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಶಾಂತಪ್ಪ ಕಾಳೆ ಅವರು ಜೂನ್ 12ರಂದು ಜಾಮೀನುರಹಿತ ಬಂಧನ ವಾರಂಟ್ (ಎನ್‌ಬಿ‌ಡಬ್ಲ್ಯು) ಜಾರಿ ಮಾಡಿದ್ದರು.‌ ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಬೆಳಗ್ಗೆ ಕಲಾಪದ ವೇಳೆ ಖುದ್ದು ಹಾಜರಿದ್ದ ಪ್ರಕಾಶ್ ರಾಜ್, ಎನ್‌ಬಿಡಬ್ಲ್ಯು ಹಿಂಪಡೆಯಲು ಕೋರಿ ಅರ್ಜಿ ಸಲ್ಲಿಸಿದರು. ಈ ವೇಳೆ ಪ್ರಕಾಶ್ ರಾಜ್ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಬಿಡಬ್ಯು ಜಾರಿ ಮಾಡಿರುವ ನ್ಯಾಯಾಲಯದ ಆದೇಶ ತಲುಪಿಲ್ಲ. ಆದರೆ, ನ್ಯಾಯಾಲಯದ ಆದೇಶ ಕುರಿತ ಮಾಧ್ಯಮದ ವರದಿ ತಿಳಿದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

ಮುಂದುವರಿದು, ತಮಿಳುನಾಡಿನಲ್ಲಿ ಪ್ರಕಾಶ್ ರಾಜ್ ಅವರು ಮತದಾರರ ಗುರುತಿನ ಚೀಟಿ ಹೊಂದಿದ್ದರು. ಅದನ್ನು ಡಿಲೀಟ್ ಮಾಡಿಸಲಾಗಿದೆ. ಈ ಖಾಸಗಿ ದೂರನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅದು ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಜಾಮೀನುರಹಿತ ವಾರಂಟ್ ಹಿಂಪಡೆಯಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದನ್ನು ಪರಿಗಣಿಸಿದ ನ್ಯಾಯಾಲಯ, ಪ್ರಕಾಶ್ ರಾಜ್ ಅವರ ವಿರುದ್ಧದ ಎನ್‌ಬಿಡಬ್ಲ್ಯು ಆದೇಶ ಹಿಂಪಡೆದು, ಜಾಮೀನು ಮಂಜೂರು ಮಾಡಿತು. ಜತೆಗೆ, 4 ಸಾವಿರ ರೂ. ಗಳ ಭದ್ರತಾ ಖಾತರಿ ಒದಗಿಸಲು ಪ್ರಕಾಶ್ ರಾಜ್ ಅವರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.

Related Articles

Comments (0)

Leave a Comment