ಯೋಗೀಶ ಗೌಡರ್ ಕೊಲೆ ಪ್ರಕರಣದಲ್ಲಿ ಟಿಂಗರೀಕರ ಅವರಿಂದ ನಕಲಿ ಸಾಕ್ಷ್ಯ ಸೃಷ್ಟಿ; ಸಿಬಿಐ ಪ್ರತಿಪಾದನೆ
- by LegalSamachar
- May 26, 2026
- 5 Views
ಬೆಂಗಳೂರು: ಯೊಗೀಶ ಗೌಡರ್ ಕೊಲೆ ನಡೆದಾಗ ಮೊದಲಿಗೆ ತನಿಖೆ ನಡೆಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ ಅವರು ನೈಜ ಆರೋಪಿಗಳನ್ನು ಪರಾರಿಯಾಗಲು ಬಿಟ್ಟು, ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಮುಚ್ಚಿಟ್ಟು, ನಕಲಿ ಶಸ್ತ್ರಾಸ್ತ್ರಗಳಿಗೆ ಮರಣೋತ್ತರ ಪರೀಕ್ಷೆ ನಡೆಸಿದಾಗ ದೊರೆತ ರಕ್ತ ಸವರುವ ಮೂಲಕ ಸ್ವತಃ ಸಾಕ್ಷಿ ಸೃಷ್ಟಿಸಿದ್ದಾರೆ ಎಂದು ಹೈಕೋರ್ಟ್ ಮುಂದೆ ಸಿಬಿಐ ಬಲವಾಗಿ ಪ್ರತಿಪಾದಿಸಿತು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ 7 ವರ್ಷ ಜೈಲು ಶಿಕ್ಷೆ ರದ್ದು ಕೋರಿ ಮೇಲ್ಮನವಿ ಸಲ್ಲಿಸಿರುವ ಪ್ರಕರಣದ 19ನೇ ಆರೋಪಿ ಚನ್ನಕೇಶವ ಟಿಂಗರೀಕರ, ಶಿಕ್ಷೆ ಅಮಾನತುನಲ್ಲಿಟ್ಟು ಜಾಮೀನು ಮಂಜೂರು ಮಾಡಬೇಕು ಎಂದು ಮೇಲ್ಮನವಿಯಲ್ಲಿ ಮಧ್ಯಂತರ ಮನವಿ ಮಾಡಿದ್ದಾರೆ.
ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸಿಬಿಐ ಪರ ವಾದ ಮಂಡಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್.ವಿ. ರಾಜು ಅವರು, ಯೋಗೀಶ ಗೌಡರ್ ಪ್ರಕರಣದಲ್ಲಿ ಟಿಂಗರೀಕರ ಅವರು ತನಿಖಾಧಿಕಾರಿಯಾಗಿದ್ದರು. ಸಿಸಿ ಕ್ಯಾಮರಾ ದೃಶ್ಯಗಳನ್ನು ಸಂಗ್ರಹಿಸಿದ್ದರೂ 7ರಿಂದ 14ನೇ ಆರೋಪಿಗಳನ್ನು ಮೊದಲು ಆರೋಪಿಗಳನ್ನಾಗಿಸಿಲ್ಲ. ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಅವರ ಹೆಸರನ್ನು ತೆಗೆಯದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮುಂದುವರಿದು, ಸಾಕ್ಷ್ಯ ನಾಶ ಅಪರಾಧಕ್ಕೆ ಐಪಿಸಿ ಸೆಕ್ಷನ್ 201 ಮತ್ತು 218ರ ಅಡಿ ಟಿಂಗರೀಕರ ಅವರಿಗೆ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಕಾನೂನಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣ ಶಿಕ್ಷೆ ವಿಧಿಸಲು ಅವಕಾಶವಿದ್ದರೆ ವಿಚಾರಣಾ ನ್ಯಾಯಾಲಯ ವಿಧಿಸುತ್ತಿತ್ತು. ಮೇಲ್ಮನವಿದಾರರು ಜೈಲಿನಲ್ಲಿ 70ಕ್ಕೂ ಅಧಿಕ ದಿನವಷ್ಟೇ ಕಳೆದಿದ್ದಾರೆ. ಈ ಹಂತದಲ್ಲಿ ಶಿಕ್ಷೆ ಅಮಾನತು ಮಾಡಿ ಜಾಮೀನು ಮಂಜೂರು ಮಾಡಬಾರದು. 2 ವರ್ಷದ ನಂತರ ಅರ್ಜಿ ಸಲ್ಲಿಸಲು ಆದೇಶಿಸಬೇಕು. ಮೇಲ್ನೋಟಕ್ಕೆ ಜಾಮೀನು ನೀಡುವ ಹಾಗೂ ಶಿಕ್ಷೆ ಅಮಾನತು ಮಾಡುವ ಪ್ರಕರಣ ಇದೆ ಎಂಬುದನ್ನು ಮೇಲ್ಮನವಿದಾರರು ನ್ಯಾಯಾಲಯಕ್ಕೆ ತೋರಿಸಬೇಕು ಎಂದು ವಾದಿಸಿದರು.
ಟಿಂಗರೀಕರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಇತರರ ಜತೆ ಸೇರಿ ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರೀಕರ ವಿರುದ್ಧವಿದೆ. ಅದಕ್ಕೆ 7 ವರ್ಷ ಶಿಕ್ಷೆ ವಿಧಿಸಲಾಗಿದೆ. ಇದು ಜಾಮೀನು ನೀಡಬಹುದಾದ ಆರೋಪಗಳಾಗಿವೆ. 2026ರ ಏಪ್ರಿಲ್ 15ರಿಂದ ಟಿಂಗರೀಕರ ಜೈಲಿನಲ್ಲಿರುವುದರಿಂದ ಸ್ವಯಂಚಾಲಿತವಾಗಿ ಅವರನ್ನು ಅಮಾನತಿನಲ್ಲಿ ಇಡಲಾಗಿದೆ. ಪ್ರಕಣರದಲ್ಲಿ ಬಸವರಾಜ ಮುತ್ತಗಿ ಮತ್ತು 17ನೇ ಆರೋಪಿಯಾಗಿದ್ದ ಶಿವಾನಂದ ಶ್ರೀಶೈಲ ಬಿರಾದಾರ ಅವರು ಅಪ್ರೂವರ್ ಆಗಿದ್ದು, ಅವರ ಸಾಕ್ಷಿ ಆಧರಿಸಿ ಟೆಂಗರೀಕರ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಆದ್ದರಿಂದ, ಶಿಕ್ಷೆ ಅಮಾನತುಪಡಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಈ ಮಧ್ಯೆ ಶಿಕ್ಷೆ ಅಮಾನತಿಗೆ ವಿರೋಧಿಸಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಸಂತ್ರಸ್ತರ ಪರ ವಕೀಲರು, ತಾವು ಎಎಸ್ಜಿ ಅವರ ವಾದವನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ (ಮೇ 29) ಮುಂದೂಡಿತು.
Related Articles
Thank you for your comment. It is awaiting moderation.



Comments (0)